ಕೊರಟಗೆರೆ:
ಕೊರಟಗೆರೆ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕೆಡಿಪಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾಪಂಚಾಯತ್ ಸಿಇಒ ಪ್ರಭು, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತುಮಕೂರು ಗ್ರಾಮಾಂತರ, ಮಧುಗಿರಿ, ಕೊರಟಗೆರೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಪರಮೇಶ್ವರ್, ನಾನು ಹಳ್ಳಿಗಳಿಗೆ ಹೋದಾಗ ಸರ್ಕಾರಿ ಶಾಲೆಯ ಕೊಠಡಿಗಳು ಶಿಥಿಲವಾಗಿರೋದು ಕಂಡುಬಂದಿವೆ. ಎಷ್ಟು ಶಾಲೆಗೆ ಕೊಠಡಿಗಳು ಬೇಕು, ಶೌಚಾಲಯಗಳ ಕೊರತೆ ಎಷ್ಟಿದೆ, ಎಂಬುದರ ಬಗ್ಗೆ ನನಗೆ ಮಾಹಿತಿ ಕೊಡಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಕೊರಟಗೆರೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಪಟ್ಟಣ ಪಂಚಾಯತ್ ಮತ್ತು ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಬಳಿಕ ಜಲ ಜೀವನ್ ಮಿಷನ್ ಕಾಮಗಾರಿ ಯಾವಾಗ ಮುಗಿಸುತ್ತೀರಿ. ಇನ್ನೆಷ್ಟು ದಿನ ಕಾಮಗಾರಿ ಮುಗಿಸಲು ಸಮಯ ಬೇಕು, ಕೂಡಲೇ ಹಳ್ಳಿಗಳಲ್ಲಿ ಮಾರ್ಚ್ ಒಳಗೆ ಕಾಮಗಾರಿಯನ್ನು ಮುಗಿಸಿ ನೀರಿನ ಸಂಪರ್ಕ ಕಲ್ಪಿಸಿ, ಕಾಮಗಾರಿ ಲ್ಯಾಪ್ಸ್ ಆದರೆ ಅದಕ್ಕೆ ಇಲಾಖೆಯವರೇ ಜವಾಬ್ದಾರಿ. ಬೇಜಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಸರಿಯಾಗಿ ಸಮರ್ಪಕ ಅಂಕಿ ಅಂಶದ ಮಾಹಿತಿ ತರದೇ ಸಭೆಗೆ ಹಾಜರಾಗಿದ್ದ ಅಧಿಕಾರಿಗಳಿಗೆ ಪರಮೇಶ್ವರ್ ಕ್ಲಾಸ್ ತೆಗೆದುಕೊಂಡರು, ಕಾಮಗಾರಿಯ ಪ್ರಗತಿಯ ಮಾಹಿತಿ ಕೇಳಿದರೆ ಆ ಕಡೆ ಈ ಕಡೆ ಏನ್ ನೋಡ್ತಿರಾ ಮಾಹಿತಿ ಏನಿದೇ ಅದನ್ನು ಹೇಳಿ. ಸಮರ್ಪಕ ಅಂಕಿ ಅಂಶದ ಮಾಹಿತಿ ತರದೇ ಸಭೆಗೆ ಏನಕ್ಕೆ ಬರ್ತೀರಾ ನೀವು.? ಎಂದು ಜಿಲ್ಲಾ ಪಂಚಾಯತ್ ಎಇಇ ಮಂಜುನಾಥಗೆ ಕ್ಲಾಸ್ ತೆಗೆದುಕೊಂಡರು.
ಸಿಎಂ ವಿಶೇಷ ಅನುದಾನದಲ್ಲಿ ಕೊರಟಗೆರೆ ಕ್ಷೇತ್ರದ 16 ಮುಖ್ಯರಸ್ತೆಯ ಕಾಮಗಾರಿಗಳಿಗೆ 10 ಕೋಟಿ ಅನುಧಾನ ಬಂದಿದೆ. ರಸ್ತೆ ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳೊದು ಅಧಿಕಾರಿಗಳ ಪ್ರಮುಖ ಕರ್ತವ್ಯ , ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.