ಮೈಸೂರು :
ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಕಾರು ಚಾಲಕ ಸಾವನ್ನಪ್ಪಿದರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಮಂಚನಹಳ್ಳಿಯಲ್ಲಿ ನಡೆದಿದೆ. ಮೈಸೂರಿನ ಕನಕದಾಸನಗರ ನಿವಾಸಿ ಸುನೀಲ್ (34) ಎಂಬುವರು ಮೃತದುರ್ದೈವಿಯಾಗಿದ್ದಾರೆ.
ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿಯಾದ ಸುನೀಲ್ ತಮ್ಮ ಕಾರಿನಲ್ಲಿ ಮೈಸೂರಿನಿಂದ ಹಾಸನದ ಕಡೆಗೆ ಹೋಗುತ್ತಿದ್ದಾಗ ಚಿಕ್ಕಮಗಳೂರಿನಿಂದ ಮೈಸೂರು ಕಡೆಗೆ ಬರ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಇನ್ನು ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಕಾರಿನಲ್ಲಿದ್ದ ರಮೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ವಿಷಯ ತಿಳಿದು ಕೆ.ಆರ್ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.