ಧೋನಿ ಫ್ಯಾನ್ಸ್‌ಗೆ ಗುಡ್ ನ್ಯೂಸ್. 2 ವರ್ಷಗಳ ಬಳಿಕ ಎಂಎಸ್ ಧೋನಿ ಮತ್ತೆ ಸಿಎಸ್‌ಕೆ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಧೋನಿ ಮತ್ತೆ ಚೆನ್ನೈ ತಂಡಕ್ಕೆ ನಾಯಕರಾಗಿ ಮರಳುತ್ತಿದ್ದಾರೆ. ಲೆಜೆಂಡ್ ಕ್ರಿಕೆಟರ್ ಎಂಎಸ್ ಧೋನಿಯನ್ನು ಮತ್ತೆ ಮೈದಾನದಲ್ಲಿ ನೋಡುವುದೇ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಅಭಿಮಾನಿಗಳಿಗಾಗಿ ಧೋನಿ ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಬ್ಯಾಟಿಂಗ್ ನೋಡಿ ಖುಷಿಪಟ್ಟಿದ್ದಾರೆ. ಇದೀಗ ಧೋನಿಯನ್ನು ಮೈದಾನದಲ್ಲಿ ನೋಡುವುದು ಮಾತ್ರವಲ್ಲ, ಧೋನಿ ನಾಯಕತ್ವ ಕಣ್ತುಂಬಿಕೊಳ್ಳಲು ಅಭಿಮಾನಿಗಳು ರೆಡಿಯಾಗಿದ್ದಾರೆ.
ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಮಹಿ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಹಾಲಿ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಅವರು ಮುಂಗೈ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಪಂದ್ಯಕ್ಕೆ ಅವರ ಲಭ್ಯತೆ ಬಗ್ಗೆ ಖಚಿತವಾಗಿಲ್ಲ. ಹಾಗಾಗಿ ಧೋನಿ ಅವರೇ ನಾಯಕತ್ವದ ಹೊಣೆ ಹೊರಲಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತುಷಾರ್ ದೇಶ್‌ಪಾಂಡೆ ಅವರ ಬೌಲಿಂಗ್‌ನಲ್ಲಿ ಚೆಂಡು ರುತುರಾಜ್ ಅವರ ಬಲಭಾಗದ ಮುಂಗೈಗೆ ಬಡಿದಿತ್ತು. ಈ ವೇಳೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು, ರುತುರಾಜ್ ಬ್ಯಾಟಿಂಗ್ ಮುಂದುವರಿಸಿದ್ದರು. ಸದ್ಯ ಅವರು ಪಂದ್ಯದಲ್ಲಿ ಮುಂದುವರಿಯುವ ಸಾಧ್ಯತೆಗಳು ಕಡಿಮೆ ಇದೆ. ಪ್ಲೇಯಿಂಗ್-11 ಪ್ರಕಟಿಸುವ ಮುನ್ನ ರುತುರಾಜ್ ಲಭ್ಯತೆಯ ಬಗ್ಗೆ ತಿಳಿಸಲಾಗುತ್ತದೆ. ಒಂದು ವೇಳೆ ಅಲಭ್ಯರಾದ್ರೆ ಎಂ.ಎಸ್ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಹೇಳಿದ್ದಾರೆ.