ಮಂಗಳೂರು:
ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 23 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ.
ಗುಲ್ಬರ್ಗಾ ಜಿಲ್ಲೆಯ ಉಮ್ಮರ್ ಕಾಲೋನಿ ನಿವಾಸಿ ಶೇಕ್ ಸಿಕಂದರ್ (22) ಹಾಗೂ ಮಂಗಳೂರು ನಗರದ ಕೆಂಜಾರು ನಿವಾಸಿ ಮೊಹಮ್ಮದ್ ತೌಫಿಕ್ (29) ಬಂಧಿತ ಆರೋಪಿಗಳಾಗಿದ್ದಾರೆ. ಶೇಕ್ ಸಿಕಂದರ್ ಎಂಬಾತನು ಮಾದಕ ವಸ್ತು ಎಂಡಿಎಂಎ ಅನ್ನು ಮುಂಬೈನಲ್ಲಿ ಖರೀದಿಸಿ ಮಂಗಳೂರಿನ ಆರೋಪಿಯಾದ ಮೊಹಮ್ಮದ್ ತೌಫಿಕ್ ನಿಗೆ ಮಾರುತ್ತಿದ್ದ, ಈತ ಅಕ್ರಮ ಲಾಭಗಳಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕ ವಸ್ತು ಎಂಡಿಎಂಎ ಮಾರಾಟ ಜಾಲದ ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 1,15,000 ರೂ ಮೌಲ್ಯದ 23 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ , 2 ಮೊಬೈಲ್ ಪೋನ್ ಮತ್ತು ಸುಜುಕಿ ಸ್ಕೂಟರ್ ಸೇರಿ ಸುಮಾರು 2,10.000 ರೂ ಮೌಲ್ಯದ ವಸ್ತುವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.