ಮಹಾರಾಷ್ಟ್ರ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕರ್ನಾಟಕದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಯುವಕರು ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿಗೆ ಕುಡಿಯುವ ಪಾನೀಯದಲ್ಲಿ ಔಷಧಿ ಬೆರೆಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಮೇ 20 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಬೆಳಗಾವಿ ಮೂಲದ ಯುವತಿ ಆಗಿದ್ದು, ಆಕೆ ಸ್ನೇಹಿತರೊಂದಿಗೆ ಸಿನಿಮಾ ನೋಡಿ ಸ್ನೇಹಿತರ ಪ್ಲ್ಯಾಟ್ ಗೆ ತೆರಳಿದ್ದಾಗ ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ, ಆಕೆಗೆ ಕುಡಿಸಿ ಮೂವರು ಯುವಕರು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಯುವತಿ ಎದ್ದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಆಕೆ ಪೋಷಕರಿಗೆ ತಿಳಿಸಿ ಬಳಿಕ ಸಾಂಗ್ಲಿಯ ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ವಿಶ್ರಾಂಬಾಗ್ ಪೊಲೀಸರು ಸೋಲ್ಲಾಪುರದ ವಿನಯ್ ಪಾಟೀಲ್ (22), ಪುಣೆಯ ಸರ್ವಜ್ಞ ಗಾಯಕವಾಟ (22), ಹಾಗೂ ಸಾಂಗ್ಲಿಯ ತನ್ಮಯ್ ಪೇಡ್ಲನೆಕರ್ (21) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.