ಮಹಾಕುಂಭಮೇಳ:
ಕಳೆದ ಜ.29 ರಂದು ಮೌನಿ ಅಮವಾಸ್ಯೆ ದಿನ ಪ್ರಯಾಗ್‌ರಾಜ್‌ನ ಕುಂಭಮೇಳದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ದೆಹಲಿ ರೈಲು ನಿಲ್ದಾಣದಲ್ಲಿ ಭಕ್ತರು ಕುಂಭಮೇಳಕ್ಕೆಂದು ತೆರಳುತ್ತಿದ್ದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ದೆಹಲಿ ರೈಲು ನಿಲ್ದಾಣದಲ್ಲಿ ಮಹಾ ಕುಂಭಮೇಳಕ್ಕೆ ಎರಡು ರೈಲುಗಳು ವಿಳಂಬವಾಗಿದ್ದರಿಂದ ಶನಿವಾರ ರಾತ್ರಿ ಜನದಟ್ಟಣೆ ಉಂಟಾಗಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ.
ವಾರಾಂತ್ಯವಾಗಿದ್ದರಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ ಹೋಗುವ ಜನ ಸಂಖ್ಯೆ ಹೆಚ್ಚಾಗಿದ್ದು, ಹೋಗಲು ಎರಡು ರೈಲುಗಳು ತಡವಾಗಿ ಬಂದಿವೆ. ಪ್ರಯಾಗ್‌ರಾಜ್ ಮೂಲಕ ಹಾದುಹೋಗುವ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲುಗಳು ನಿಲ್ದಾಣಕ್ಕೆ ಬರುವುದು ವಿಳಂಬವಾಗಿದೆ. ರೈಲು ತಡವಾಗಿ ಬಂದಿದ್ದರಿಂದ ರೈಲು ಹತ್ತಲು ನೂಕುನುಗ್ಗಲಾಗಿ ರಾತ್ರಿ 8 ಗಂಟೆ ಸುಮಾರಿಗೆ ಕಾಲ್ತುಳಿತ ಉಂಟಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ 10 ಮಹಿಳೆಯರು, ಮೂವರು ಮಕ್ಕಳು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೇಡಿ ಹಾರ್ಡಿಂಗ್ ಆಸ್ಪತ್ರೆಯಿಂದ ಇನ್ನೂ ಮೂರು ಸಾವುಗಳು ವರದಿಯಾಗಿವೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2.5 ಲಕ್ಷ ರೂ. ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ.