ಕೊರಟಗೆರೆ :
ದ್ವಿಚಕ್ರ ವಾಹನಕ್ಕೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಹಬ್ಬಕ್ಕೆಂದು ಊರಿಗೆ ಹೊರಟಿದ್ದ ಗಂಡ ಹೆಂಡತಿ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಚಿಕ್ಕಪಾಲನಹಳ್ಳಿ ಗೇಟ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಪಾವಗಡ ತಾಲೂಕಿನ ವೈ.ಎನ್.ಹೋಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದ ನಿವಾಸಿ ರಮೇಶ್ ಹಾಗೂ ಆತನ ಪತ್ನಿ ಶಿವಮ್ಮ ಎಂಬುವರು ಮೃತ ದುರ್ದೈವಿಯಾಗಿದ್ದಾರೆ.
ಯುಗಾದಿ ಹಬ್ಬಕ್ಕೆಂದು ದಂಪತಿ ಬೈಕ್ ನಲ್ಲಿ ಬೆಂಗಳೂರಿನಿಂದ ಪಾವಗಡಕ್ಕೆ ಹೋಗುವ ವೇಳೆ ಸರ್ಕಾರಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಸರ್ಕಾರಿ ಬಸ್ ಚಾಲಕರ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಅಪಘಾತಗಳು ಹೆಚ್ಚುತ್ತಲಿವೆ ಎಂದು ಸ್ಥಳೀಯರು ಆರೋಪಿಸ್ತಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ, ಕೊರಟಗೆರೆ ಸಿಪಿಐ ಅನಿಲ್, ಕೋಳಾಲ ಪಿಎಸೈ ರೇಣುಕಾಯಾದವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.