ಕೊರಟಗೆರೆ:
ಜೀವನ ಕಟ್ಟಿಕೊಳ್ಳಲು ಊರಿಂದ ಊರಿಗೆ, ಅಷ್ಟೇ ಯಾಕೆ ಬೇರೆ ರಾಜ್ಯಗದ ಜನರೂ ಕೂಡ ವಲಸೆ ಬಂದು, ಯಾವುದೋ ಒಂದು ಪುಟ್ಟ ಉದ್ಯಮಗಳನ್ನು ಶುರು ಮಾಡಿ ಅದೆಷ್ಟೋ ಕುಟುಂಬಗಳು ಬದುಕು ಕಟ್ಟಿಕೊಳ್ಳುತ್ತಿವೆ. ಅದರಂತೆ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಹೊರ ರಾಜ್ಯದಿಂದ ಬಂದ ಮುಸ್ಲಿಂ ಕುಟುಂಬವೊಂದು ಸಲೂನ್‌ಗಳನ್ನು ಪ್ರಾರಂಭಿಸಿ ದುಡಿದು ಬದುಕುತ್ತಿದ್ದಾರೆ. ಆದರೆ ಇವರು ಅನಧಿಕೃತವಾಗಿ ಅಂಗಡಿ ತೆರದಿದ್ದಾರೆ, ಇದರಿಂದ ಭಜಂತ್ರಿ ಸಮುದಾಯದ ಕುಟುಂಬಗಳಿಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದು ಆರೋಪಿಸಿ ಸವಿತಾ ಸಮಾಜದವರು ತಮ್ಮ 12 ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಭಜಂತ್ರಿ ಸಮುದಾಯದವರು ಅಂಗಡಿ ಮುಚ್ಚಿದರೆ ಮುಸ್ಲಿಂರು ಮಾತ್ರ ಕ್ಷೌರದ ಅಂಗಡಿಗಳನ್ನು ತೆರೆದು ಕೆಲಸ ಮಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಸವಿತಾ ಸಮಾಜದವರು ಮುಸ್ಲಿಂ ಅಂಗಡಿಗಳ ಬಳಿ ತೆರಳಿ ಅಂಗಡಿ ಮುಚ್ಚಿಸಲು ಯತ್ನಿಸಿದ್ದಾರೆ. ಅಲ್ಲದೇ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಗ್ರಾಮ ಪಂಚಾಯ್ತಿಯಿಂದ ಮುಸ್ಲಿಂ ಕುಟುಂಬದವರು ಲೈಸೆನ್ಸ್ ಪಡೆಯದೇ ಸಲೂನ್ ತೆಗೆದಿದ್ದಾರೆ. ಅವರು ಕ್ಷೌರಕ್ಕೆ ಬರುವವರಿಂದ ಕಡಿಮೆ ಹಣ ಪಡೆದು ಕಟಿಂಗ್ ಹಾಗೂ ಶೇವಿಂಗ್ ಮಾಡ್ತಾರೆ. ಜೊತೆಗೆ ಒಂದು ದಿನವೂ ಅಂಗಡಿಗೆ ರಜೆ ಮಾಡದೇ ನಿತ್ಯ ಕಟಿಂಗ್ ಮಾಡ್ತಾರೆ. ಇದರಿಂದ ಭಜಂತ್ರಿ ಸಮುದಾಯದವರ ಅಂಗಡಿಗಳಿಗೆ ಲಾಸ್ ಆಗ್ತಾ ಇದೆ. ನಾವು ಪೂರ್ವಜರ ಕಾಲದಿಂದಲೂ ಇದೇ ಕೆಲಸ ಮಾಡಿಕೊಂಡು ಜೀವನ ಮಾಡ್ತಾ ಇದ್ದು, ಇವರಿಂದ ನಮಗೆ ಆದಾಯ ಕಡಿಮೆ ಆಗ್ತಾ ಇದ್ದು ನಮ್ಮ ಕುಟುಂಬ ಜೀವನ ಸಾಗಿಸಲು ಕಷ್ಟವಾಗ್ತಿದೆ ಹೀಗಾಗಿ ಮುಸ್ಲಿಂ ಅವರ ಸಲೂನ್ ಅಂಗಡಿಯನ್ನು ಖಾಲಿ ಮಾಡಿಸಿ ಎಂದು ಸವಿತಾ ಸಮಾಜದ ಮುಖಂಡರು ಆಗ್ರಹಿಸಿದರು.
ಸಮಾಜದ ಮುಖಂಡರು, ಮುಸ್ಲಿಂ ಅಂಗಡಿಗಳ ಮುಂದೆ ತೆರಳಿ ನಾವು ನಮ್ಮ ಅಂಗಡಿಗಳನ್ನು ಮುಚ್ಚಿದ್ದೇವೆ. ನೀವು ನಿಮ್ಮ ಅಂಗಡಿ ಮಳಿಗೆಯನ್ನು ಮುಚ್ಚಿ. ಗ್ರಾಪಂ ಪರವಾನಗಿ ಇಲ್ಲದೇ ಅಂಗಡಿ ಮಳಿಗೆ ತೆರೆಯಬಾರದು ಎಂದು ಬಲವಂತವಾಗಿ ಅಂಗಡಿ ಮುಚ್ಚಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಮುಸ್ಲಿಂ ಕುಟುಂಬದವರ ಸಲೂನ್ ಅಂಗಡಿಗಳನ್ನು ಬಂದ್ ಮಾಡಿಸಿದ್ದಕ್ಕೆ ಮುಸ್ಲಿಂ ಕುಟುಂಬ ಕಣ್ಣೀರಾಕುತ್ತಿದೆ. ಹೌದು ಸುಮಾರು 15 ವರ್ಷದಿಂದ ಕೊರಟಗೆರೆ ಪಟ್ಟಣದಲ್ಲಿ ನಾವು ವಾಸವಿದ್ದೇವೆ. ನಮ್ಮದು ಸ್ವಂತ ಮನೆ ಮತ್ತು ಅಂಗಡಿಗಳಿವೆ. ಪಟ್ಟಣ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಯಿಂದ ನಮಗೇ ಆಧಾರ್, ಐಡಿ ಮತ್ತು ರೇಷನ್ ಕಾರ್ಡ್ ನೀಡಿದೆ. ನಮಗೇ ಗೊತ್ತಿರೋದು ಸೇಲ್ಯೂನ್ ಕೆಲಸ ಅಷ್ಟೇ ಬೇರೆ ಕೆಲಸ ನಮಗೆ ಬರಲ್ಲ. ದುಡಿದು ತಿನ್ನುವ ಕೈಗಳಿಗೆ ಸುಮ್ಮನೇ ತೊಂದರೇ ಕೊಡ್ತಾ ಇದ್ದಾರೆ. ಕೆಲಸ, ದುಡಿಮೆ ಇಲ್ಲದೇ ನಮ್ಮ ಜೀವನ ನಡೆಯೋದು ಹೇಗೆ..?. ಗ್ರಾಮೀಣ ಭಾಗದ ಬಡಗ್ರಾಹಕರಿಂದ 10 ರೂಪಾಯಿ ಕಡಿಮೆ ಪಡೆದುಕೊಂಡರೇ ತಪ್ಪೇನು ಹೇಳಿ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಮುಸ್ಲಿಂ ಕುಟುಂಬದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿ, ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯ್ತಿ ಪಿಡಿಒಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ತೋವಿನ ಕೆರೆ ಗ್ರಾಮ ಪಂಚಾಯ್ತಿಯ ಪಿಡಿಒ ಲಕ್ಷ್ಮೀ ನಾರಾಯಣ್, ಅನಧಿಕೃತವಾಗಿ ಅಂಗಡಿ ಪ್ರಾರಂಭ ಮಾಡಿದ್ದರೇ ನೊಟೀಸ್ ಜಾರಿ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.
ಅದೇನೆ ಇರಲಿ ಪ್ರತಿಯೊಬ್ಬರು ಕೆಲಸ ಮಾಡೋದು ಹೊಟ್ಟೆಪಾಡಿಗಾಗಿ. ಆದರೆ ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ. ನಮ್ಮ ಸಮಾಜದಲ್ಲಿ ಎಲ್ಲಾ ಸಮುದಾಯದವರು ಸಹೋದರರಂತೆ ಬದುಕುತ್ತಿದ್ದಾರೆ. ಅಲ್ಲದೆ ಪ್ರತಿಯೊಬ್ಬರಿಗೆ ಎಲ್ಲಿ ಆದರೂ ದುಡಿಮೆ ಮಾಡಲು ಸ್ವಾತಂತ್ರ್ಯವಿದೆ ಹಾಗಂತಾ ಮತ್ತೊಬ್ಬರ ದುಡಿಮೆಯನ್ನು ಕಿತ್ತುಕೊಳ್ಳುವುದು ಸರಿಯಲ್ಲ, ಹೀಗಾಗಿ ಅನಧಿಕೃತವಾಗಿ ಅಂಗಡಿ ತೆರೆದಿದ್ರೆ ಅವರು ಮುಸ್ಲಿಂ ಅವರು ಆಗಲಿ ಭಜಂತ್ರಿ ಸಮುದಾಯದವರಾಗಲಿ. ಅಂತಹವರ ವಿರುದ್ಧ ಕ್ರಮ ಕೈಗೊಂಡು ಕಷ್ಟ ಪಟ್ಟು ದುಡಿಯುತ್ತಿರೋ ಕುಟುಂಬಗಳಿಗೆ ಜೀವನಕ್ಕೆ ದಾರಿ ಮಾಡಿಕೊಡಬೇಕಿದೆ. ಅಲ್ಲದೇ ಎಲ್ಲರೂ ಒಟ್ಟಾಗಿ ಇಂತಿಷ್ಟು ಹಣ ಎಂದು ನಿಗಧಿ ಮಾಡಿ ನಾಮಫಲಕ ಅಳವಡಿಸಲು ಆದೇಶ ಮಾಡಬೇಕಿದೆ ಅನ್ನೋದು ಸವಿತಾ ಸಮಾಜದ ಆಗ್ರಹವಾಗಿದೆ.