ಕೊರಟಗೆರೆ:
ಪಿಡಿಒ ಅಧಿಕಾರಿ ಗ್ರಾಮ ಪಂಚಾಯತಿಯಲ್ಲಿ ಸಭೆ ಮಾಡದೇ ಸದಸ್ಯರ ಮನೆ ಬಳಿ ಹೋಗಿ ಸಹಿ ಮಾಡಿಸಿಕೊಂಡು ಅನುದಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಎಂದು ಆರೋಪಿಸಿ ಗ್ರಾಮ ಪಂಚಾಯತಿ ಸದಸ್ಯರಿಂದಲೇ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಹೌದು ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮ ಪಂಚಾಯತಿ ಕಚೇರಿಯ ಮುಂದೆ ಜಮಾಯಿಸಿದ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿ ಕಿಡಿಕಾರಿದ್ದಾರೆ.
ಗ್ರಾಮ ಪಂಚಾಯತಿ ಕಚೇರಿಯಲ್ಲಿ 15 ದಿನಕ್ಕೊಮ್ಮೆ ಪಿಡಿಒ ಅಧಿಕಾರಿ ಸಭೆ ಮಾಡಬೇಕಿತ್ತು, ಆದರೆ ಸಭೆ ಮಾಡದೇ ಅನುದಾನವನ್ನು ಪಡೆಯಲು ಗ್ರಾಮ ಪಂಚಾಯ್ತಿ ಸದಸ್ಯರ ಮನೆ ಬಳಿಯೇ ಹೋಗಿ ಸಹಿ ಮಾಡಿಸಿಕೊಂಡು ಬರುತ್ತಾರೆ. ಗ್ರಾಮ ಪಂಚಾಯತಿಗೆ ಸಿಕ್ಕ ಅನುದಾನವನ್ನು ದುರುಪಯೋಗ ಮಾಡಿಕೊಳ್ತಾ ಇದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಂದಾಯ ವಸೂಲಿ ಬಗ್ಗೆ ಮಾಹಿತಿ ಕೇಳಿದರೆ ಪುಸ್ತಕಗಳೇ ಕಚೇರಿಯಲ್ಲಿ ಇಲ್ಲ. ಅಲ್ಲದೇ ನಕಲು ರಸೀದಿಗಳನ್ನು ಹಿಂದಿನ ಪಿಡಿಒ ನೀಡಿಲ್ಲ ಎಂದು ಉಡಾಫೆ ಉತ್ತರ ಕೊಡ್ತಾ ಇದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗಡಿ ಮಳಿಗೆ ಹಾಗೂ ತರಕಾರಿ ಸಂತೆಯ ಹರಾಜು ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ಕೂಡ ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಹಿತಿ ನೀಡದೇ ಗೌಪ್ಯವಾಗಿ ಇಟ್ಟಿರೋದು ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಅಕ್ಕಿರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ನಾಗರಾಜು ಮತ್ತು ಪಿಡಿಓ ರವಿಕುಮಾರ್ ಅವರ ಏಕಪಕ್ಷಿಯ ನಿರ್ಧಾರಕ್ಕೆ ಬೇಸತ್ತಿದ್ದೇವೆ. ಹೀಗಾಗಿ ನಾವು ಗ್ರಾಮ ಪಂಚಾಯತಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇವೆ, ಎಂದು ಗ್ರಾಮಪಂಚಾಯತಿ ಸದಸ್ಯರಾದ ಮಧುಸೂದನ್ ಮತ್ತು ಲೊಕೇಶ್ ತಿಳಿಸಿದರು. ಗೃಹ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡಲೇ ಗ್ರಾಮ ಪಂಚಾಯತಿ ಸಮಸ್ಯೆಯನ್ನು ತನಿಖೆ ಮಾಡಿ, ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದರು.