ಕೊರಟಗೆರೆ :
ಕೊರಟಗೆರೆ ತಾಲೂಕಿನ ಪ್ರಮುಖ ಪ್ರವಾಸಿ ಸ್ಥಳವಾದ ಶ್ರೀ ಸಿದ್ದರಬೆಟ್ಟಕ್ಕೆ ಬರುವ ಭಕ್ತರಿಗೆ ಲೋಕೋಪಯೋಗಿ ಇಲಾಖೆ ಖುಷಿಯ ಸುದ್ದಿಯೊಂದನ್ನು ನೀಡಿದೆ. ಸಿದ್ದರಬೆಟ್ಟ ಮತ್ತು ನೇಗಲಾಲ ಗ್ರಾಮದ ಜನರು ಹಾಗೂ ಶ್ರೀ ಕ್ಷೇತ್ರ ಸಿದ್ದರಬೆಟ್ಟಕ್ಕೆ ಬರುವಂತಹ ಭಕ್ತರ, ಪ್ರವಾಸಿಗರ ಬಹುದಿನಗಳ ಬೇಡಿಕೆ ಈಡೇರಿಸಲು ಇಲಾಖೆ ಮುಂದಾಗಿದೆ. ಸಿದ್ದರಬೆಟ್ಟ 2 ಕಿಲೋ ಮೀಟರ್ ಮುಖ್ಯರಸ್ತೆ ಅಭಿವೃದ್ಧಿಗೆ ಇಲಾಖೆ ಮುಂದಾಗಿದೆ. ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಜಿ ಪರಮೇಶ್ವರ್ ಸುಮಾರು ಒಂದು ಕೋಟಿ ಐವತ್ತು ಲಕ್ಷ ರೂ ಅನುದಾನವನ್ನು ರಸ್ತೆಗೆ ಮೀಸಲಿಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾಗಣ್ಣ ಸ್ಥಳೀಯ ಮುಖಂಡರೊಂದಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಸಿದ್ದರಬೆಟ್ಟ ತಪೋಕ್ಷೇತ್ರದ ಮುಖ್ಯರಸ್ತೆಯ ಶಂಕುಸ್ಥಾಪನಾ ಕಾರ್ಯ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೇರವೇರಿತು. ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ಕೆ ಎಸ್ ಸ್ವಾಮಿ, ಸಹಾಯ ಇಂಜಿನಿಯರ್ ನಿಖಿಲ್, ಕಿರಿಯ ಇಂಜಿನಿಯರ್, ಹೇಮಂತ್, ಗುತ್ತಿಗೆದಾರರಾದ ಶಿವಾನಂದ್, ಮನೋಜ್ ಸ್ಥಳೀಯ ಮುಖಂಡರಾದ ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಪುಟ್ಟನರಸಪ್ಪ, ಸೋಮಣ್ಣ ಸೇರಿ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ ನಾಗಣ್ಣ, ನೇಗಲಾಲ ಮತ್ತು ಸಿದ್ದರಬೆಟ್ಟ ಗ್ರಾಮಸ್ಥರ ಬಹುದಿನದ ಮುಖ್ಯ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿಯು ಸಚಿವರಾದ ಪರಮೇಶ್ವರ್ ಅವರ ಆದೇಶದ ಮೇರೆಗೆ ಇದೀಗ ಶಂಕು ಸ್ಥಾಪನೆ ಕಾರ್ಯ ನಡೆದಿದೆ. ಈ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಗ್ರಾಮಗಳಿಗೆ ಹೆಚ್ಚಿನ ಮೂಲ ಸೌಕರ್ಯ ದೊರಕಿಸಲು ಸರ್ಕಾರ ಮುಂದಾಗಿದೆ. ಗ್ರಾಮಗಳು ಅಭಿವೃದ್ಧಿಯಾದರೆ, ದೇಶ ಅಭಿವೃದ್ದಿ ಹೊಂದಲಿದೆ. ಇದೇ ವೇಳೆ ಸಂಬಂಧಪಟ್ಟ ಗುತ್ತಿಗೆದಾರರು ಗುಣಮಟ್ಟದ ರಸ್ತೆಯನ್ನು ನಿಗದಿತ ಕಾಲ ಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪಿಡಬ್ಲ್ಯೂಡಿ ಎಇಇ ಕೆ ಎಸ್ ಸ್ವಾಮಿಗೆ ಸೂಚಿಸಿದರು.
ಶ್ರೀ ವೀರಭದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಮಾತನಾಡಿ, ಸಚಿವರಾದ ಡಾ ಜಿ ಪರಮೇಶ್ವರ್ ಅವರ ಸಹಕಾರದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಯ ಭೂಮಿ ಪೂಜೆ ನೆರವೇರಿದೆ. ಕಳೆದ ಐದಾರು ವರ್ಷಗಳಿಂದ ರಸ್ತೆಯು ಅಭಿವೃದ್ಧಿಯಾಗದೆ ತೊಂದರೆ ಉಂಟಾಗುತ್ತಿತ್ತು. ರಸ್ತೆ ಅಭಿವೃದ್ಧಿಯಿಂದ ಈ ಭಾಗದ ಎಲ್ಲಾ ರೈತರಿಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ರಸ್ತೆ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಈ ಭಾಗದ ರಸ್ತೆಯು ಕಳೆದ ಐದಾರು ವರ್ಷಗಳಿಂದ ಅಭಿವೃದ್ಧಿಗೊಳ್ಳದೆ ನೆಲಗುದಿಗೆ ಬಿದ್ದಿತ್ತು. ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ವಿಶೇಷ ಕಾಳಜಿಯೊಂದಿಗೆ ಇದೀಗ ರಸ್ತೆ ಅಭಿವೃದ್ಧಿ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.