ತುಮಕೂರು:
ತುಮಕೂರಿನ ಕುಣಿಗಲ್ ಸರ್ಕಲ್ ಬಳಿ ಇರೋ ಔಟರ್ ರಿಂಗ್ ರೋಡ್‌ನಲ್ಲಿ ನಡೆದಿದ್ದ ರಾಬರಿ ಕೇಸ್ ಸಂಬಂಧ ಇಂದು ಐವರು ದರೋಡೆಕೋರರನ್ನು ಪೊಲೀಸರು ಖೆಡ್ಡಾಗೆ ಕೆಡವಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ. ಈ ದರೋಡೆಕೋರರನ್ನು ಬಂಧಿಸಿದ್ದೇ ರೋಚಕವಾಗಿದೆ. ಔಟರ್ ರಿಂಗ್ ರೋಡ್‌ನಲ್ಲಿ ನಡೆದ ರಾಬರಿ ಗ್ಯಾಂಗ್ ಸಂಬಂಧ ಪ್ರಕರಣ ತಿಲಕ್ ಪಾರ್ಕ್ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯಿಂದ ರೈತನೋರ್ವ ಬೆಂಗಳೂರಿಗೆ ಬುಲೆರೋ ಗಾಡಿಯಲ್ಲಿ ಟಮೋಟೋ ಸಾಗಿಸ್ತಾ ಇದ್ದ. ಈ ವೇಳೆ ತುಮಕೂರಿನ ಔಟರ್ ರಿಂಗ್ ರೋಡ್‌ನಲ್ಲಿ ಗಾಡಿಯನ್ನು ಸೈಡ್‌ಗೆ ಹಾಕಿ ಡ್ರೈವರ್ ಹಾಗೂ ಜೊತೆಗಿದ್ದವರು ಗಾಡಿಯಲ್ಲೇ ನಿದ್ದೆಗೆ ಜಾರಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ರಾಬರಿ ಗ್ಯಾಂಗ್ ಡ್ರೈವರ್ ಗಿರೀಶ್‌ಗೆ ಚಾಕುವಿನಿಂದ ಚುಚ್ಚಿ ಅವರ ಬಳಿಯಿದ್ದ 17 ಗ್ರಾಂ ಚಿನ್ನದ ಸರ, ಮೊಬೈಲ್, ದುಡ್ಡನ್ನು ಗ್ಯಾಂಗ್ ಎಗರಿಸಿ ಎಸ್ಕೇಪ್ ಆಗಿದ್ದರು. ಅಲ್ಲದೇ ಬಂಡಿಮನೆ ಕಲ್ಯಾಣ ಮಂಟಪದ ಬಳಿ ವೆಲ್ಡಿಂಗ್ ಹಾಗೂ ಕಬ್ಬಿಣದ ವಸ್ತುಗಳನ್ನು ಖದೀಮ ಗ್ಯಾಂಗ್ ಎಗರಿಸಿದ್ದರು. ಈ ಎರಡು ಪ್ರಕರಣಗಳ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಬರಿ ಗ್ಯಾಂಗ್‌ನ ಖೆಡ್ಡಾಗೆ ಬೀಳಿಸಲು ತಿಲಕ್ ಪಾರ್ಕ್ ಪೊಲೀಸರು ಬಲೆಯನ್ನು ಹೆಣೆದಿದ್ದರು.
ಭಾನುವಾರ ರಾತ್ರಿ 10:30ರ ಸುಮಾರಿಗೆ ನಗರದ ಗಂಗಸಂದ್ರದ ರಸ್ತೆಯಲ್ಲಿ ಆರು ಜನರ ಗ್ಯಾಂಗ್ ಡಕಾಯತಿ ಮಾಡಲು ಹೊಂಚು ಹಾಕಿ ಕೂತಿದ್ದರು. ಈ ಬಗ್ಗೆ ತಿಲಕ್ ಪಾರ್ಕ್ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ರಹಸ್ಯ ಕಾರ್ಯಚರಣೆ ನಡೆಸಲು ಮುಂದಾದರು. ಹೊಂಚು ಹಾಕಿ ಸಂಚು ಮಾಡಲು ಕೂತಿದ್ದ ಆರು ಮಂದಿಯಲ್ಲಿ ಗ್ಯಾಂಗ್‌ನನ್ನು ಅಟ್ಟಾಡಿಸಿ ಐದು ಮಂದಿ ಖದೀಮರನ್ನು ಬಂಧಿಸಿದ್ದು, ಓರ್ವ ಕಳ್ಳ ಪರಾರಿಯಾಗಿದ್ದು, ಆತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಬಂಧನವಾಗಿರೋ ಐವರಲ್ಲಿ ಮೂವರು ಆರೋಪಿಗಳು ಮೊನ್ನೆ ರಾತ್ರಿ ನೆಡೆದ ರೋಡ್ ರಾಬರಿ ಪ್ರಕರಣದ ಆರೋಪಿಗಳಾಗಿದ್ದು, ಇನ್ನಿಬ್ಬರು ಬಂಡಿಮನೆ ಕಲ್ಯಾಣ ಮಂಟಪದ ಬಳಿ ನಡೆದ ಕಬ್ಬಿಣ ಮತ್ತು ವೆಲ್ಡಿಂಗ್ ವಸ್ತುಗಳ ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಗಳು ಎಂದು ತಿಳಿದುಬಂದಿದೆ.
ಸದ್ಯ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ಪೊಲೀಸರು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತಷ್ಟು ವಿಚಾರಣೆಗೊಳಪಡಿಸಿ ಖತರ್ನಾಕ್ ಗ್ಯಾಂಗ್ ಇನ್ನು ಯಾವ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋದನ್ನು ತಿಳಿಯಲು ಮುಂದಾಗಿದ್ದಾರೆ.