Coconut : ತೆಂಗು ಉತ್ಪಾದನೆಯಲ್ಲಿ ಕೇರಳವನ್ನು ಹಿಂದಿಕ್ಕಿದ ಕರ್ನಾಟಕ

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
ಕೃಷಿ

ತೆಂಗಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ಕೇರಳವನ್ನು ಹಿಂದಿಕ್ಕಿದೆ. ಕರ್ನಾಟಕ, ಭಾರತದ ಅಭಿವೃದ್ಧಿಗೆ ತನ್ನದೇ ಆದ ಹಲವು ಕೊಡುಗೆ ನೀಡುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಒಂದು. ಹಲವು ವಿಚಾರಗಳಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೃಷಿ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ, ಭಾರತದಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ. ಚಿಕ್ಕಮಗಳೂರು, ಕೊಡಗು ಕಾಫಿ ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಇದೀಗ ತೆಂಗು ಉತ್ಪಾದನೆ ವಿಚಾರದಲ್ಲಿ ಕೂಡ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.

ಈವರೆಗೆ ತೆಂಗು ಉತ್ಪಾದನೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿತ್ತು, ಇದೀಗ ಕೇರಳವನ್ನು ಹಿಂದಿಕ್ಕಿರುವ ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆಂಗು ಉತ್ಪಾದನೆ ಮಾಡುವ ದೇಶವಾಗಿದೆ. ತೆಂಗಿನಕಾಯಿ ಅಭಿವೃದ್ಧಿ ಮಂಡಳಿ ಪ್ರಕಾರ, 2022-23 ರಲ್ಲಿ ಕೇರಳ 563 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡಿದ್ದರೆ, ಕರ್ನಾಟಕ 595 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡುವ ಮೂಲಕ ಕೇರಳವನ್ನು ಹಿಂದಿಕ್ಕಿದೆ.

2021-22ರಲ್ಲಿ ಕೇರಳ 552 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡಿತ್ತು ಮತ್ತು ಇದೇ ಅವಧಿಯಲ್ಲಿ ಕರ್ನಾಟಕ 518 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದಿಸಿತ್ತು. 2023-24 ಮೊದಲ ಎರಡು ತ್ರೈಮಾಸಿಕದ ಅವಧಿಯಲ್ಲಿ ಕರ್ನಾಟಕ 726 ಕೋಟಿ ತೆಂಗಿನಕಾಯಿಗಳನ್ನು ಉತ್ಪಾದನೆ ಮಾಡುವ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇದೇ ಅವಧಿಯಲ್ಲಿ ತಮಿಳುನಾಡು 578 ಕೋಟಿ ತೆಂಗಿನ ಕಾಯಿಗಳನ್ನು ಉತ್ಪಾದನೆ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಕೇರಳ 564 ಕೋಟಿ ತೆಂಗಿನಕಾಯಿ ಉತ್ಪಾದನೆ ಮಾಡುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ. 2023-2024ರ ವಾರ್ಷಿಕ ಅಂಕಿಅಂಶಗಳನ್ನು ಸಿಬಿಡಿ ಇನ್ನೂ ಬಿಡುಗಡೆ ಮಾಡಿಲ್ಲ.

ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ತೆಂಗಿನ ಕೃಷಿಯನ್ನು ಮಾಡಲಾಗುತ್ತಿದೆ. ಕೃಷಿ ತಂತ್ರಗಳ ಸುಧಾರಣೆಯಿಂದಾಗಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುವ ಯುವ ಜನತೆ ಕೂಡ ತೆಂಗು ಕೃಷಿಯತ್ತ ಗಮನ ಹರಿಸಿದ್ದು ಉತ್ಪಾದನೆಯನ್ನು ಹೆಚ್ಚಿಸಿದೆ. ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕೊಬ್ಬರಿ ಉತ್ಪಾದನೆಯಲ್ಲಿ ಕೂಡ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಏಷ್ಯಾದಲ್ಲೇ ದೊಡ್ಡ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿದೆ.

 

Author:

...
Editor

ManyaSoft Admin

Ads in Post
share
No Reviews