IPL 2025 : ಅಹಮದಾಬಾದ್ನಲ್ಲಿ ಜೂನ್ 3ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18ರ ಫೈನಲ್ ಪಂದ್ಯವನ್ನು ಭಾರತೀಯ ಸೈನಿಕರಿಗೆ ಸಮರ್ಪಿಸುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದೆ. ಈ ವೇಳೆ ‘ಆಪರೇಷನ್ ಸಿಂಧೂರ್’ ವಿಜಯೋತ್ಸವವೂ ಜರುಗಲಿದೆ.
2025 ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪಾಕಿಸ್ತಾನ್ ಬೆಂಬಲಿತ ಉಗ್ರರ ದಾಳಿಯಲ್ಲಿ 26 ಭಾರತೀಯರು ಮೃತಪಟ್ಟಿದ್ದು, ಇದರ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನ ಮೇಲೆ ಯಶಸ್ವಿ ದಾಳಿ ಮಾಡಿತ್ತು. ಬಿಸಿಸಿಐ ಈ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಶೌರ್ಯವನ್ನು ಗೌರವಿಸುವುದಾಗಿ ತಿಳಿಸಿದೆ.
ಐಪಿಎಲ್ ಫೈನಲ್ ಸಮಾರೋಪ ಸಮಾರಂಭದಲ್ಲಿ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಭೂಸೇನೆ, ನೌಕಾಪಡೆ, ವಾಯುಪಡೆ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಮಿಲಿಟರಿ ಬ್ಯಾಂಡ್ ಪ್ರದರ್ಶನವೂ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.