ಗುಬ್ಬಿ:
ಗುಬ್ಬಿಯಪ್ಪ ಅಂತಲೇ ಪ್ರಸಿದ್ಧಿ ಪಡೆದಿರೋ ಗುಬ್ಬಿಯ ಶ್ರೀ ಗೋಸಲ ಚನ್ನಬಸವೇಶ್ವರರ ಪವಾಡಗಳ ಬಗ್ಗೆ ಕಳೆದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ನಾಗಾಸಾಧು ಒಬ್ಬರು ಆಡಿದ್ದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಗುಬ್ಬಿಯಪ್ಪನ ಪವಾಡದ ಬಗ್ಗೆ ನಗಾಸಾಧು ಆಡಿದ್ದ ಮಾತುಗಳನ್ನ ಕೇಳಿ ಅದೇಷ್ಟೋ ಭಕ್ತರು ಸಂತಸಪಟ್ಟಿದ್ರು. ಹಾಗಿದ್ರೆ ಆ ಪವಾಡ ಪಾದುಕೆಗಳು ಯಾವುವು? ಅವು ಎಲ್ಲಿವೆ? ಪ್ರತೀ ವರ್ಷ ಅದನ್ನ ತಯಾರು ಮಾಡೋದ್ಯಾರು? ಇದೆಲ್ಲದರ ಬಗ್ಗೆ ಒಂದಿಷ್ಟು ಮಾಹಿತಿಯನ್ನ ನಾವು ನಿಮಗೆ ತಿಳಿಸಿ ಕೊಡುತ್ತೇವೆ ನೋಡಿ.
ಹೌದು15ನೇ ಶತಮಾನದಲ್ಲಿ ಚನ್ನಬಸವೇಶ್ವರರುಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಿಂದ ಬಂದು ಗುಬ್ಬಿಯಲ್ಲಿ ನೆಲೆಸಿದ್ದರು ಅಂತಾ ಹೇಳಲಾಗುತ್ತೆ. ಇವರು ರಾಜ ಗುರುಗಳಾಗಿ ಜೊತೆಗೆ ಸಾಹಿತಿಗಳಾಗಿ ಗುಬ್ಬಿಯ ಸುತ್ತಮುತ್ತ ಪ್ರವಾಸ ಕೈಗೊಂಡು ತಮ್ಮ ತಪಸ್ ಶಕ್ತಿಯಿಂದ ಜನರ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ಬಗೆಹರಿಸುತ್ತಿದ್ದರೆಂಬ ನಂಬಿಕೆ ಇಂದಿಗೂ ಜನರಲ್ಲಿದೆ.ಇಂತಹ ಪವಾಡ ಪುರುಷರ ಪಾದುಕೆಗಳ ಕಾರ್ಯವನ್ನು ವಂಶಪಾರಂಪರ್ಯದಿಂದ ನೆಡೆಸಿಕೊಂಡು ಬಂದಿರುವುದು ಬೇರೆ ಯಾರೂ ಅಲ್ಲ. ಗುಬ್ಬಿಯ ಸಮೀಪದಲ್ಲೇ ಇರುವ ಚಿಕ್ಕೋನಹಳ್ಳಿ ಗ್ರಾಮದ ದಲಿತ ಕುಟುಂಬದವರು.
ಈ ಕುಟುಂಬದ ಇಂದಿನ ಪೀಳಿಗೆಯವರು ಹೇಳುವ ಪ್ರಕಾರ ಸುಮಾರು 300 ವರ್ಷಗಳಿಂದ ತಮ್ಮ ವಂಶಸ್ಥರು ಪಾದುಕೆಯ ನಿರ್ಮಾಣ ಕಾರ್ಯ ಮಾಡುತ್ತಿದ್ದು ಈಗಲೂ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರಂತೆ. ಇನ್ನು ಮತ್ತೊಂದು ಮೈ ನವಿರೇಳುವ ವಿಚಾರವನ್ನ ಚಿಕ್ಕೋನಹಳ್ಳಿ ಗ್ರಾಮದ ದಲಿತಯುವಕ ನರಸಿಂಹಮೂರ್ತಿ ಹಂಚಿಕೊಂಡಿದ್ದು ಇವರು ಬರಿಗಾಲಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಗುರುವಿನ ಪಾದುಕೆಯನ್ನು ಹೊತ್ತುಕೊಂಡು ಸಾಗುತ್ತಾರಂತೆ.
ಈ ಹಿಂದೆ ಯಾವುದೇ ಸುದ್ದಿ ಮಾಧ್ಯಮ ಇಲ್ಲದ ಕಾರಣ ಜನರಿಗೆ ಗುಬ್ಬಿಯಪ್ಪನ ಜಾತ್ರೆ ಯಾವಾಗ ಎಂದು ತಿಳಿಸುವ ಸಲುವಾಗಿ ಗುರುಗಳ ಪಾದುಕೆಗಳನ್ನು ಊರಿಂದ ಊರಿಗೆ ಹೊತ್ತು ಪೂಜೆ ಮಾಡಿಸಿ ಜಾತ್ರೆಯ ನಾಂಕ ತಿಳಿಸಿ ಬರುತ್ತಿದ್ದರಂತೆ. ಅದೇ ಪದ್ಧತಿಯನ್ನ ಇಂದಿಗೂ ಕೂಡ ಮುಮದುವರೆಸಿ ಕೊಂಡು ಬರಲಾಗುತ್ತಿದೆಯಂತೆ.
ಚಿಕ್ಕೋನಹಳ್ಳಿ ಗ್ರಾಮದಲ್ಲಿನ ನಿರ್ದಿಷ್ಟ ಜಾಗವೊಂದರಲ್ಲಿ ಗುಡಿಸಲು ನಿರ್ಮಾಣ ಮಾಡಿ ನಿತ್ಯ ಪೂಜೆ ಸಲ್ಲಿಸಿ ಹೊಸ ಪಾದುಕೆ ನಿರ್ಮಾಣ ಮಾಡುತ್ತಿದ್ದು ಇವರು ಹೇಳುವ ಪ್ರಕಾರ ಹಳೆಯ ಪಾದುಕೆಗಳಲ್ಲಿ ಹೆಜ್ಜೆಗುರುತು ಕಲ್ಲು ಮುಳ್ಳುಗಳ ಗುರುತು ಗೋಚರವಾಗುತ್ತದಂತೆ. ಇವರ ಪ್ರಕಾರ ಇಂದಿಗೂ ಚನ್ನಬಸವೇಶ್ವರಸ್ವಾಮಿಯವರು ಈ ಪಾದುಕೆಗಳನ್ನು ಹಾಕಿಕೊಂಡು ಸಂಚಾರ ಮಾಡುತ್ತಾರೆಂಬ ನಂಬಿಕೆ ಇವರದ್ದಾಗಿದೆ.
ಹೊಸದಾಗಿ ತಯಾರಾದ ಪಾದುಕೆಗಳನ್ನು ಚನ್ನಬಸವೇಶ್ವರಸ್ವಾಮಿ ರಥೋತ್ಸವದ ದಿನ ಸಂಜೆ 4 ಗಂಟೆಗೆ ದೇವಾಲಯದ ಆವರಣದಲ್ಲಿರುವ ಗೂಡಿಗೆ ತಂದು ಇಡುತ್ತಾರೆ. ಅಂದಿನಿಂದ ಒಂದು ವರ್ಷಗಳ ಕಾಲ ಈ ಪಾದುಕೆ ಸವೆಯುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಏನೇ ಆಗಲಿ 15ನೇ ಶತಮಾನದಲ್ಲಿ ಪವಾಡಗಳನ್ನು ಮಾಡಿ 21ನೇ ಶತಮಾನದಲ್ಲೂ ಭಕ್ತರ ಹೃದಯಕಮಲದಲ್ಲಿ ನೆಲೆಸಿರುವ ಶ್ರೀ ಗೋಸಲ ಚನ್ನಬಸವೇಶ್ವರರ ರಥೋತ್ಸವ ಪಾಲ್ಗುಣ ಮಾಸದ ದಶಮಿಯ ದಿನ ಅಂದರೆ ಇದೇ ತಿಂಗಳ 5 ರಿಂದ ಆರಂಭವಾಗಿ, 23ರವರೆಗೆ ನೆಡೆಯುತ್ತಿದ್ದು, ಲಕ್ಷಾಂತರ ಜನ ಭಕ್ತರು ಈ ರಥೋತ್ಸವವನ್ನ ಕಣ್ತುಂಬಿಕೊಂಡು ಪುನೀತರಾಗುತ್ತಾರೆ.