ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸಂಚಲನವನ್ನು ಸೃಷ್ಟಿ ಮಾಡ್ತಾ ಇದೆ. ಬಜೆಟ್ ಅಧಿವೇಶನದಲ್ಲಿ ಹನಿಟ್ರ್ಯಾಪ್ ಬಗ್ಗೆ ವಿಪಕ್ಷಗಳು ಗದ್ದಲ ಸೃಷ್ಟಿಮಾಡಿದ್ದು, ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ಕಿಡಿಕಾರಿದ್ರು. ಹನಿಟ್ರ್ಯಾಪ್ ಪ್ರಕರಣ ಸಂಬಂಧ ಅಧಿವೇಶನದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಉತ್ತರಿಸಿದ್ದು ದೂರು ಕೊಟ್ಟರೆ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ರು.
ಈ ಬೆನ್ನಲ್ಲೇ ಸಚಿವ ರಾಜಣ್ಣ ಪುತ್ರ ರಾಜೇಂದ್ರ ಮಧುಗಿರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನನ್ನ ಮೇಲೆ ಹಾಗೂ ನನ್ನ ತಂದೆ ಮೇಲೆ ಹನಿಟ್ರ್ಯಾಪ್ ಯತ್ನ ಆಗಿದೆ ಎಂದು ಬಾಂಬ್ ಸಿಡಿಸಿದ್ರು. ಅಲ್ದೇ ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿ ಮಾಡಿ, ಹನಿಟ್ರ್ಯಾಪ್ ಬಗ್ಗೆ ಸಿಎಂಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲಾ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಅನ್ನೋದನ್ನ ಸಿಎಂ ಗಮನಕ್ಕೆ ತಂದಿದ್ದೇನೆ, ಸಿಎಂ ಕಂಪ್ಲೇಟ್ ಕೊಡಲು ಹೇಳಿದ್ದಾರೆ, ನಾಳೆ ಹನಿಟ್ರ್ಯಾಪ್ ಯತ್ನದ ಬಗ್ಗೆ ಡಿಜಿ ಮತ್ತು ಐಜಿಪಿಗೆ ದೂರು ಸಲ್ಲಿಸುತ್ತೇನೆ ಎಂದ್ರು.
ಇನ್ನು ಹನಿಟ್ರ್ಯಾಪ್ ಯತ್ನದ ಹಿಂದೆ ಮಹಾ ನಾಯಕನ ಕೈವಾಡ ಇದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ರಾಜಣ್ಣ ಹಿಂದುಳಿದ, ದಲಿತ ನಾಯಕ, ಅವರ ಮೇಲೆ ಈ ರೀತಿ ಆಗೋದು ಒಳ್ಳೆಯ ಬೆಳವಣಿಗೆ ಅಲ್ಲ. ನಾವು ಯಾರ ಮೇಲೂ ಕಂಪ್ಲೇಟ್ ಕೊಟ್ಟಿಲ್ಲ, ಇದ್ರ ಹಿಂದೆ ಯಾರೇ ಇದ್ರು ನಿಲ್ಲಬೇಕು ಎಂದು ರಾಜೇಂದ್ರ ರಾಜಣ್ಣ ಮಹಾನಾಯಕನ ಹೆಸರೇಳದೇ ಗುಡುಗಿದ್ರು.ಇನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿದ್ದ ಮಹಾನಾಯಕನ ಬಗ್ಗೆ ಮಾತನಾಡಲು ಡಿಕೆಶಿ ನಿರಾಕರಿಸಿದ್ರು.ಅಲ್ದೇ ಸಿಎಂ ಸಿದ್ದರಾಮಯ್ಯ ಅವರನ್ನು ರಾಜೇಂದ್ರ ರಾಜಣ್ಣ ಭೇಟಿ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿಗಳನ್ನು ಯಾರು ಬೇಕಾದರೂ ಮುಖ್ಯಮಂತ್ರಿಗಳನ್ನು ಯಾರು ಬೇಕಾದರೂ ಭೇಟಿ ಮಾಡಿಕೊಳ್ಳಲಿ. ಅವರು ಇವರನ್ನು ಭೇಟಿ ಮಾಡಿದರು, ಎಂದು ನನ್ನನ್ನು ಯಾಕೆ ಕೇಳುತ್ತೀರಾ? ಮುಖ್ಯಮಂತ್ರಿಗಳು ಅಂದಮೇಲೆ ಎಲ್ಲಾ ಸಚಿವರು, ಶಾಸಕರು, ಸಂಸದರು, ಸಾರ್ವಜನಿಕರು ಭೇಟಿ ಮಾಡುವುದು ಸಹಜ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು, ಅಲ್ದೇ ಸದನದಲ್ಲಿ ಹನಿಟ್ರ್ಯಾಪ್ ವಿಚಾರಕ್ಕೆ ವಿಪಕ್ಷಗಳು ಗರಂ ಆಗಿಲ್ಲ, ಇದೆಲ್ಲವೂ ಬೋಗಸ್, ಯಾರು ಗರಂ ಆಗಿದ್ದಾರೆ? ಸುಮ್ಮನೆ ಸುಳ್ಳು ಸುದ್ದಿಗಳನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಇತ್ತ ಸಚಿವ ಕೆ,ಎನ್ ರಾಜಣ್ಣಗೆ ಹನಿಟ್ರ್ಯಾಪ್ ಯತ್ನದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕಾಂಗ್ರೆಸ್‌ನಲ್ಲಿ ಬಿರುಗಾಳಿಯೇ ಎದ್ದಿದೆ. ಹನಿಟ್ರ್ಯಾಪ್ ಯತ್ನದ ಬಗ್ಗೆ ಸಚಿವ ರಾಜಣ್ಣ ಸಮರ ಸಾರಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆದುಕೊಂಡಿದ್ದಾರೆ. ಇದ್ರ ಬೆನ್ನಲ್ಲೇ ಅಲರ್ಟ್ ಆದ ಹೈಕಮಾಂಡ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬೆಂಗಳೂರಿನ ಸಿಎಂ ನಿವಾಸ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.
ಒಟ್ನಲ್ಲಿ ಹನಿಟ್ರ್ಯಾಪ್ ಯತ್ನದ ಬಗ್ಗೆ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನಾಯಕರಿಗೆ ಕರೆ ಮಾಡಿ ಮಾಹಿತಿ ಪಡೆದಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರನ್ನು ಖರ್ಗೆ ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಲ್ದೇ ದಿನಕ್ಕೊಂದು ರಾಜಕೀಯ ನಾಯಕರ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದ್ದು ಮುಂದಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣ ಅದ್ಯಾವ ತಿರುವು ಪಡೆಯುತ್ತೋ, ಆ ಮಹಾನಾಯಕ ಯಾರು ಅಂತಾ ಬಯಲಾಗುತ್ತೋ ಕಾದುನೋಡಬೇಕಿದೆ.