ಹಾವೇರಿ:
ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರುನ ಕೋಡ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಪಕ್ಕಿರವ್ವ ನಿಂಗಪ್ಪ ಸಣ್ಣತಮ್ಮಣ್ಣನವರ ಮೃತ ಮಹಿಳೆಯಾಗಿದ್ದಾರೆ. ಕೋಡ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಜಾತ್ರೆಗೆ ಹೋಗಿಬರುತ್ತೇನೆಂದು ಹೇಳಿ ಹೋಗಿದ್ದರು, ಆದರೆ ಮಹಿಳೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದ ಹೊರವಲಯದಲ್ಲಿರೋ ದುರ್ಗಾದೇವಿ ದೇವಾಲಯದ ಮಧ್ಯ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆ ಅರೆ ಬೆತ್ತಲಾಗಿ ಬಿದ್ದಿದ್ದಳು. ಅದನ್ನು ಕಂಡ ದೇವಸ್ಥಾನದ ಪೂಜಾರಿ ಅಲ್ಲೆ ಇದ್ದ ಭಿಕ್ಷುಕರಿಗೆ ಹೇಳಿ ಬಟ್ಟೆ ಉಡಿಸಿ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ತೀವ್ರ ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಎಂಟು ದಿನದ ನಂತರ ಸಾವನಪ್ಪಿದ್ದಾರೆ. ಇನ್ನು ಮೃತ ಮಹಿಳೆ ಕುಟುಂಬಸ್ಥರು ಅತ್ಯಾಚಾರಗೈದು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಘಟನೆ ಸಂಬಂಧ ಪೊಲೀಸರು ಕೋಡ ಗ್ರಾಮದ ಗದಿಗೆಪ್ಪ ಪಾಟೀಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೃತ ಮಹಿಳೆ ಕೊನೆ ಕರೆ ಈತನಿಗೆ ಮಾಡಿದ್ದು ಜೊತೆಗೆ ಇವರಿಬ್ಬರು ಸಲಿಗೆಯಿಂದ ಇದ್ದರು ಎನ್ನುವ ಕಾರಣಕ್ಕಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮ ಮನೆ ಮಗಳಿಗಾದ ಅನ್ಯಾಯ ಬೇರೆ ಹೆಣ್ಣುಮಕ್ಕಳಿಗೆ ಆಗಬಾರದು ಎಂದು ಸಂಬಂಧಿಕರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಒಟ್ಟಿನಲ್ಲಿ ಮಹಿಳೆಯ ಸಾವಿನ ಹಿಂದಿನ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.