ಹಾವೇರಿ:
ಬೇಸಿಗೆ ಆರಂಭಕ್ಕೂ ಮುನ್ನ ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಿದ್ದು. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕರೂರು ಗ್ರಾಮದಲ್ಲಿ ಶನಿವಾರ ರಾತ್ರಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, 6 ಹಸುಗಳು ಹಾಗೂ 2 ಕರುಗಳು ಸ್ಥಳದಲ್ಲೇ ಸಜೀವ ದಹನವಾಗಿರುವ ಘಟನೆ ನಡೆದಿದೆ.
ಕರೂರು ಗ್ರಾಮದ ರೈತ ನಾಗಪ್ಪ ಅಸುಂಡಿ. ಹನುಮಂತಪ್ಪ ಅಸುಂಡಿ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಊರಿನ ಹೊರಭಾಗದ ಜಾಗದಲ್ಲಿರುವ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಲಾಗಿತ್ತು, ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ 6 ಹಸುಗಳು, 2 ಕರು ಸ್ಥಳದಲ್ಲಿಯೇ ಸಜೀವ ದಹನವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಯಲ್ಲಿ ಸುಮಾರು 6 ಲಕ್ಷದ ಅಧಿಕ ಮೌಲ್ಯದ ದನದ ಕೊಟ್ಟಿಗೆ ಮತ್ತು ಹಸುಗಳು ಸುಟ್ಟು ಕರಕಲಾಗಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.