ಹಾಸನ:
ಪಾದಚಾರಿಗಳು ಶಿವರಾತ್ರಿಯ ಆಚರಣೆಗಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾಸನ ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ.
ಅಪಘಾತದಲ್ಲಿ ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಆನಗೋಳು ಗ್ರಾಮದವರಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ದಿನೇಶ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಸನ ನಗರದ ಹೊರ ವಲಯದ ಎಚ್ ಕೆಎಸ್ ಇಂಟರನ್ಯಾಷನಲ್ ಶಾಲೆ ಬಳಿ ಈ ಘಟನೆ ನಡೆದಿದ್ದು, ಆತಂಕಗೊಂಡ ಬಸ್ ಚಾಲಕ ಪ್ರಯಾಣಿಕರನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಹಾಸನ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಬಸ್ ಜಪ್ತಿ ಮಾಡಿದ್ದಾರೆ. ಚೆನ್ನೈಗೆ ಹೋಗಬೇಕಿದ್ದ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಅಪಘಾತವು ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊರಟಿದ್ದವರ ಮೇಲೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ. ಹಾಸನ ಸಂಚಾರ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.