GUBBI : ಗುಬ್ಬಿ ತಾಲೂಕು ಕಚೇರಿಯ ಆವರಣದಲ್ಲಿದ್ದ ಸಾರ್ವಜನಿಕ ಶೌಚಾಲಯದ ಅವ್ಯವಸ್ಥೆಯ ಕುರಿತು ನಿಮ್ಮ ಪ್ರಜಾಶಕ್ತಿ ಟಿವಿ ಕೆಲವು ದಿನಗಳ ಹಿಂದೆ ಸವಿಸ್ತಾರವಾಗಿ ವರದಿ ಮಾಡಿತ್ತು. ವರದಿಗೆ ಎಚ್ಚೆತ್ತ ಅಧಿಕಾರಿಗಳು ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ತಾಲೂಕು ಕಚೇರಿ ಆವರಣದಲ್ಲಿ ಹಿಂದೂಸ್ತಾನ್ ಹೆರೋ ನಾಟಿಕ್ಸ್ (ಎಚ್.ಎ.ಎಲ್) ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಿತ್ತು. ಆದರೆ, ಕಳೆದೆರಡು ತಿಂಗಳಿಂದ ಶೌಚಾಲಯದ ನಿರ್ವಹಣೆ ಇಲ್ಲದೆ, ಗಬ್ಬೆದ್ದು ನಾರುತ್ತಿತ್ತು. ಇತ್ತ ಶೌಚಾಲಯಕ್ಕೆ ಹೋಗಲು ಸಾರ್ವಜನಿಕರು ಹಿಂದೆಟು ಹಾಕ್ತಿದ್ದರು. ಜೊತೆಗೆ ಪುರಷರು ಶೌಚಾಲಯದ ಪಕ್ಕದ ಜಾಗದಲ್ಲಿಯೇ ಮೂತ್ರ ವಿಸರ್ಜನೆ ಮಾಡ್ತಿದ್ದರು. ಈ ಕಾರಣಕ್ಕೆ ಹೆಣ್ಣು ಮಕ್ಕಳು ಸಾರ್ವಜನಿಕ ಶೌಚಾಲಯ ಬಳಸಲು ಪರದಾಡುತ್ತಿದ್ದರು. ಇಂತಹ ಸಮಸ್ಯೆಯನ್ನು ಕುರಿತು ಪ್ರಜಾಶಕ್ತಿ ಟಿವಿ ವರದಿ ಮಾಡಿತ್ತು. ಸುದ್ದಿ ಬಿತ್ತರವಾದ ಬೆನ್ನಲ್ಲೆ ತಾಲೂಕು ಆಡಳಿತ ಶೌಚಾಲಯವನ್ನು ಕ್ಲೀನ್ ಮಾಡಿಸಿದೆ. ಜೊತೆಗೆ ಶೌಚಾಲಯ ನಿರ್ವಹಣೆಗಾಗಿ ಓರ್ವ ವ್ಯಕ್ತಿಯನ್ನು ಕೂಡ ನೇಮಿಸಿದೆ. ಆ ಮೂಲಕ ಗಬ್ಬೆದ್ದು ನಾರುತ್ತಿದ್ದ ಸಾರ್ವಜನಿಕ ಶೌಚಾಲಯಕ್ಕೆ ಮುಕ್ತಿ ನೀಡಿದ್ದಾರೆ.