ಗುಬ್ಬಿ : ತೀವ್ರ ಕುತೂಹಲ ಕೆರಳಿಸಿದ್ದ ಗುಬ್ಬಿಯ ಕಲ್ಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 19 ಸದಸ್ಯರ ಪೈಕಿ ಸುಶೀಲಾ ಸದಯ್ಯ 11 ಮತಗಳನ್ನು ಪಡೆದು ಜಯಶೀಲರಾಗುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾದ ಜೂಲೆಕಾಭಿ ಯೂಸಫ್ ಅವರ ರಾಜಿನಾಮೆಯಿಂದ ಒಬಿಸಿ (ಎ) ಮೀಸಲಿನ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತೆರವಾಗಿದ್ದ ಸ್ಥಾನದ ಚುನಾವಣಾ ಪ್ರಕ್ರಿಯೆಯನ್ನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ನಡೆಸಿಕೊಟ್ಟರು. ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಜೆಮ್ ಶೆಡ್.ಬಿ ಅವರು 8 ಮತಗಳನ್ನು ಪಡೆದು ಪರಾಭವಗೊಂಡರೆ. ಅವರ ಎದುರು ಸ್ಪರ್ಧಿಸಿದ್ದ ಸುಶೀಲಾ ಸದಯ್ಯ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೂತನ ಅಧ್ಯಕ್ಷೆ ಸುಶೀಲಾ ಸದಯ್ಯ ಮಾತನಾಡಿ ಕಲ್ಲೂರು ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಿರೀಶ್ ಮಾತನಾಡಿ, ಈ ಹಿಂದೆಯೇ ಸುಶೀಲಾ ಸದಯ್ಯ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬೇಕಿತ್ತು. ಆದರೆ ದುರದೃಷ್ಟ ಸಿಕ್ಕಿರಲಿಲ್ಲ. ಆದರೆ ಈಗ ಸಿಕ್ಕಿದ್ದು, ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಿಯಾಂಕಾ ಪುರುಷೋತ್ತಮ್, ಕರಿಯಪ್ಪ, ರಂಗನಾಥ್, ಕೆ.ಎಲ್ ರವಿಕುಮಾರ್, ಮಂಜುಳಾ, ಜಯಮಾಲ,ನರಸಮ್ಮ ಮಾಯಣ್ಣ ಗೌಡ, ಗುಡಿಗೌಡ ಮೋಹನ್, ರಾಜೇಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.