ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನರ ಮೇಲೆ ತೆರಿಗೆ ಬರೆ ಹಾಕಲಾಗಿದೆ ಎಂದು ಕಿಡಿಕಾರುತ್ತಾ ಬಂದಿದ್ದು, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಆಕ್ರೋಶ ಕೂಡ ಹೊರಹಾಕಲಾಗಿತ್ತು. ಆದ್ರೆ ಗ್ಯಾರಂಟಿ ಯೋಜನೆಗಳ ವಿವಾದ, ಆರೋಪ, ವಿರೋಧಗಳ ನಡುವೆಯೂ ಸಾವಿರಾರು ಬಡ ಕುಟುಂಬಗಳ ಜೀವನಕ್ಕೆ ದಾರಿ ದೀಪಾಗಿದೆ ಎಂದ್ರೆ ತಪ್ಪಾಗಲಾರದು. ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮೀ ಹಣದಿಂದ ಅನೇಕ ಬಡ ಕುಟುಂಬಗಳು ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗ್ತಿದೆ. ಇದಕ್ಕೆ ಮಾದರಿ ಎಂಬಂತೆ ತಿಪಟೂರು ನಗರದಲ್ಲೊಂದು ವಿಶೇಷವಾದೊಂದು ಘಟನೆ ನಡೆದಿದೆ. ತಿಪಟೂರು ನಗರದ ಗಾಂಧಿನಗರದ ನಗ್ಮಾ ಭಾನು ಎಂಬ ಮಹಿಳೆ ತನಗೆ ಬರುವ ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟುಕೊಂಡು ಮಗಳಿಗೆ ಕಂಪ್ಯೂಟರ್‌ನನ್ನು ಕೊಡಿಸಿದ್ದಾರೆ.
ಮೆಕ್ಯಾನಿಕ್ ಆಗಿರೋ ಸಾಧಿಕ್ ಹಾಗೂ ನಗ್ಮಾಭಾನು ದಂಪತಿಯ ಮಗಳಾದ ಸೈದಾ ಆಫೀಸಾ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹೋಲ್ಡರ್ ಪಡೆದಿದ್ದಾರೆ.. ಇಂಥಹ ಪ್ರತಿಭಾನ್ವಿತಾ ವಿದ್ಯಾರ್ಥಿನಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ, ಸೈದಾ ಆಫೀಸಾಗೆ ಓದಲು ಅನುಕೂಲವಾಗಲೆಂದು ನಗ್ಮಾ ಭಾನುಗೆ ಬರುವ ಗೃಹಲಕ್ಷ್ಮೀ ಹಣ 2 ಸಾವಿರ ಹಣವನ್ನು ಕೂಡಿಟ್ಟು, ಜೊತೆಗೆ ಮಗಳಿಗೆ ಬಂದ ಸ್ಕಾಲರ್ ಶಿಪ್ ಹಣ ಎರಡನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ.
ಈ ಹಿಂದೆ ಗದಗದಲ್ಲಿ ಅತ್ತೆ, ಸೊಸೆ ಇಬ್ಬರು ತಮಗೆ ಬಂದ ಗೃಹಲಕ್ಷ್ಮೀ ಹಣದಿಂದ ಜಮೀನಿನಲ್ಲಿ ಬೋರ್‌ವೆಲ್ ಕೊರೆಸಿದ್ರೆ.. ಇತ್ತ ತಿಪಟೂರಿನಲ್ಲಿ ನಗ್ಮಾ ಭಾನು ಗೃಹಲಕ್ಷ್ಮೀ ಹಣವನ್ನು ಉತ್ತಮವಾಗಿ ಸದುಪಯೋಗ ಪಡಿಸಿಕೊಂಡಿದ್ದಾರೆ. ಗೃಹ ಲಕ್ಷ್ಮೀ ಹಣ ಎಲ್ಲೆಲ್ಲಿ ಸಾರ್ಥಕತೆ ಕಂಡಿದೆ ಅನ್ನೋದನ್ನ ಕಾಣಬಹುದಾಗಿದೆ. ಗೃಹ ಲಕ್ಷೀ ಹಣ ಎಷ್ಟೋ ಬಡ ಕುಟುಂಬಗಳ ಕಣ್ಣೀರನ್ನು ಹೊರೆಸಿದೆ ಎಂದ್ರೆ ತಪ್ಪಾಗಲಾರದು..