ಶಿರಾ:
ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬರ ಆರೋಗ್ಯ ಸುಧಾರಣೆಗಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಆದ್ರೆ ಸರ್ಕಾರಿ ಅಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಭಾಗವಾಗಿ ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ಗೊಮಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಪ್ರಜಾಶಕ್ತಿ ಟಿವಿ ರಿಯಾಲಿಟಿ ಚೆಕ್ ಮಾಡಿದ್ದು, ವೈದ್ಯರ ಕೊರತೆ ಇರೋದು ಕಂಡುಬಂದಿದೆ.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಮಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ, ಆಸ್ಪತ್ರೆಗೆ ಸರಿಯಾದ ಕಾಂಪೌಂಡ್ ವ್ಯವಸ್ಥೆಯೂ ಇಲ್ಲ, ಸಿಬ್ಬಂದಿಗಳು ಇಲ್ಲ. ಇದ್ರ ಜೊತೆಗೆ ಆಸ್ಪತ್ರೆ ಆವರಣವನ್ನು ರಾತ್ರಿ ವೇಳೆ ಕುಡುಕರು ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಕುಡಿದು ಬಿಸಾಡಿ ಹೋದ ಬಾಟಲ್ಗಳನ್ನು ಸ್ವಚ್ಛ ಮಾಡುವುದೇ ಇಲ್ಲಿನ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಇದ್ರ ಜೊತೆಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ಇನ್ನು ಈ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆಯಾಗಿದ್ದು, ಚಿಕಿತ್ಸೆಗೆಂದು ಸಾಕಷ್ಟು ರೋಗಿಗಳು ನಿತ್ಯ ಬರ್ತಾರೆ. ಆದ್ರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ವೈದ್ಯರೇ ತಪಾಸಣೆ, ಚುಚ್ಚುಮದ್ದು ಹಾಕುವ ಕೆಲಸವನ್ನು ಮಾಡ್ತಾರೆ. ಸಿಬ್ಬಂದಿ ಕೊರತೆಯಿಂದಾಗಿ ಚಿಕಿತ್ಸೆ ಕೊಡಲು ಇರುವ ಸಿಬ್ಬಂದಿ ಹೆಣಗಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಸಕಾಲಕ್ಕೆ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸ್ತಾ ಇದ್ದಾರೆ.
ಇದಲ್ಲದೇ ಆಸ್ಪತ್ರೆ ಸುತ್ತ ಮುತ್ತ ರೋಗಿಗಳಿಗೆ ಅನುಕೂಲವಾಗಲೆಂದು ಹೊಟೇಲ್ಗಳು ಇರುವುದು ಅನಿವಾರ್ಯ. ಆದ್ರೆ ಆಸ್ಪತ್ರೆ ಎದುರು ಎಗ್ ರೈಸ್ ಅಂಗಡಿ, ಚಹಾದ ಅಂಗಡಿಗಳು ಹೆಚ್ಚಾಗಿದ್ದು, ಆರೋಗ್ಯಕರವಾದ ವಾತಾವರಣ ಇರಬೇಕಾದ ಸ್ಥಳದಲ್ಲಿ, ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.
ಈ ಬಗ್ಗೆ ಇಲ್ಲಿನ ಆರೋಗ್ಯಾಧಿಕಾರಿಗಳಿಗೆ, ಮೇಲಧಿಕಾರಿಗಳಿಗೆ ಸ್ಥಳೀಯರು ಪತ್ರ ಬರೆದು ಸುಸ್ತಾಗಿದ್ದಾರೆ. ಯಾವುದೇ ಪ್ರಯೋಜನ ಆಗ್ತಾ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.