ಮಂಥರೆಯಾಗಿ ನಟಿ ಉಮಾಶ್ರೀಕನ್ನಡ
ಉಮಾಶ್ರೀ : ಕನ್ನಡ ಚಿತ್ರರಂಗದ ಪುಟ್ಮಲ್ಲಿ ಉಮಾಶ್ರೀ ಮೊದಲ ಬಾರಿಗೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ್ದು ಮಂಥರೆ ಪಾತ್ರದಲ್ಲಿ ಮನಸೆಳೆದಿದ್ದಾರೆ. ಹಿರಿಯ ನಟಿ, ರಾಜಕಾರಣಿ ಉಮಾಶ್ರೀ ಇಷ್ಟು ದಿನ ಸಿನಿಮಾ ನಟಿಯಾಗಿ, ಧಾರವಾಹಿಗಳಲ್ಲಿ ಅಭಿನಯಿಸಿ, ನಾಟಕಗಳಲ್ಲಿ ಬಣ್ಣಹಚ್ಚಿ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಇದೀಗ ಕರಾವಳಿಯ ಜನಪ್ರಿಯ ಜಾನಪದ ಕಲೆ ಯಕ್ಷಗಾನದಲ್ಲಿಯೂ ಪಾತ್ರ ನಿರ್ವಹಿಸಿ ಮಿಂಚಿದ್ದಾರೆ.
ಹೊನ್ನಾವರದ ಪೆರ್ಡೂರು ಮೇಳದಿಂದ ಆಯೋಜಿಸಿದ್ದ ಯಕ್ಷಗಾನದಲ್ಲಿ ಉಮಾಶ್ರೀ ನಿನ್ನೆ ಅಭಿನಯಿಸಿದ್ದರು. ಈ ಒಂದು ಅಭಿನಯವನ್ನ ಕಂಡ ಜನತೆ ಉಮಾಶ್ರೀಯವರನ್ನು ಮನಸಾರೆ ಹೊಗಳಿದ್ದಾರೆ.ರಂಗಭೂಮಿ ಹಿನ್ನೆಲೆಯಿಂದ ಬಂದ ಉಮಾಶ್ರೀ ಅವರಿಗೆ ಯಕ್ಷರಂಗದ ಟಚ್ ಇಲ್ಲ. ಇದು ಸಂಪೂರ್ಣ ಹೊಸ ಅಭಿನಯ. ಆದರೂ ಯಕ್ಷಗಾನದ ಪಟ್ಟುಗಳನ್ನು ಅರ್ಥ ಮಾಡಿಕೊಂಡವರಂತೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
ಯಕ್ಷ ದಾಖಲೆ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಉಮಾಶ್ರೀಯವರ ಮಂಥರೆ ಪಾತ್ರದ ವಿಡಿಯೊವನ್ನು ಸಾಕಷ್ಟು ಸಂಖ್ಯೆಯಲ್ಲಿ ಯಕ್ಷಗಾನ ಪ್ರೇಮಿಗಳು ವೀಕ್ಷಿಸಿದ್ದಾರೆ.ಉಮಾಶ್ರೀ ಅವರಿಗೆ ಮಂಥರೆ ಪಾತ್ರ ಹೊಸದು. ಇಲ್ಲಿವರೆಗೂ ಈ ರೀತಿಯ ಪಾತ್ರ ಮಾಡಿದ್ದೇ ಇಲ್ಲ. ಆದರೆ, ಈ ಒಂದು ಪಾತ್ರ ಮಾಡಲು ಕಾರಣ ರಾಮಚಂದ್ರ ಹೆಗಡೆ ಚಿಟ್ಟಾಣಿ . ಇವರಿಗೆ ಒಂದು ಆಸೆ ಇತ್ತು. ಅದನ್ನ ಪುತ್ರ ಸುಬ್ರಮಣ್ಯ ಚಿಟ್ಟಾಣಿ ಅವರಿಗೂ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಉಮಾಶ್ರೀ ಅವರನ್ನು ಸುಬ್ರಮಣ್ಯ ಚಿಟ್ಟಾಣಿ ಮಂಥರೆ ಪಾತ್ರ ಮಾಡುವಂತೆ ಕೋರಿದ್ದರು. ಆದರೆ, ಉಮಾಶ್ರೀ ಅವರು ಇದನ್ನು ಒಪ್ಪಿರಲಿಲ್ಲ. ನನಗೆ ಯಕ್ಷಗಾನ ಹೊಸದು. ಮಾಡೋದು ಕಷ್ಟ ಅಂತಲೇ ಹೇಳಿದ್ದರು. ಆದರೆ, ರಾಮಚಂದ್ರ ಚಿಟ್ಟಾಣಿ ಈ ಒಂದು ಪಾತ್ರವನ್ನು ನಿಮ್ಮಿಂದಲೇ ಮಾಡಿಸಬೇಕು ಅಂತ ಆಸೆ ಪಟ್ಟಿದ್ದರು ಎಂದು ಹೇಳಿದ್ದಾರೆ. ಆಗಲೇ ಉಮಾಶ್ರೀ ಅವರು ಸವಾಲಾಗಿ ತೆಗೆದುಕೊಂಡು ಕಲಿತು ಪಾತ್ರ ನಿರ್ವಹಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.