ಕುಣಿಗಲ್:
ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯ ಶನಿಮಹಾತ್ಮ ದೇವಾಲಯದ ಮುಂಭಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು, ಯುವತಿಯ ತಲೆ ಮೇಲೆ ಟ್ರಾಕ್ಟರ್ ಚಕ್ರ ಹರಿದಿದ್ದು, ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಕುಣಿಗಲ್ ತಾಲೂಕಿನ ಬಾಗೇನಹಳ್ಳಿ ಗ್ರಾಮದ 16 ವರ್ಷದ ಯುವತಿ ಹಿಂದೂಶ್ರೀ ಮೃತ ದುರ್ದೈವಿ. ಕುಣಿಗಲ್ ಪಟ್ಟಣದ ಸ್ಟೇಲ್ಲಾಮೇರಿಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಹಿಂದೂಶ್ರೀ, ಸೋಮವಾರ ಶಾಲೆಯಲ್ಲಿ ನಡೆದ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮನೆಗೆ ಸಂಬಂಧಿಯೊಬ್ಬರ ಜೊತೆ ಬೈಕ್‌ನಲ್ಲಿ ವಾಪಸ್ ಹೋಗ್ತಾ ಇದ್ದಳು. ಈ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾಳೆ. ಆಗ ಯುವತಿಯ ತಲೆ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದಿದ್ದು, ಸ್ಥಳದಲ್ಲೇ ಯುವತಿ ಸಾವನ್ನಪ್ಪಿದ್ದಾಳೆ.
ಯುವತಿಯ ಮೃತದೇಹವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಆಸ್ಪತ್ರೆಯ ಮುಂಭಾಗ ಹಿಂದೂಶ್ರೀ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸದ್ಯ ಬಾಗೇನಹಳ್ಳಿ ಗ್ರಾಮದಲ್ಲಿ ಹಬ್ಬವಿತ್ತು. ಆದರೆ ಯುವತಿಯ ಸಾವಿನಿಂದ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ. ಜೊತೆಗೆ ಇದ್ದೊಬ್ಬ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮನ ಕಲಕುವಂತಿತ್ತು. ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.