ಮಧುಗಿರಿ ಹೇಳಿ ಕೇಳಿ ಬರದ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ರೈತರು ಮಳೆಯ ನೀರನ್ನು ಮಾತ್ರ ನಂಬಿ ಕೃಷಿ ಕೆಲಸ ಮಾಡ್ತಾರೆ. ಇಲ್ಲಿ ಎಷ್ಟಿ ಬೋರ್ವೆಲ್ಗಳು ಕೊರೆಸಿದ್ರು ಕೂಡ ನೀರು ಕೃಷಿಗೆ ಬೇಕಾದಷ್ಟು ನೀರು ಸಿಗುವುದಿಲ್ಲ.ಹೀಗಾಗಿ ಈ ಭಾಗದಲ್ಲಿ ಮಳೆಯಾಧಾರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಾರೆ. ಕೆಲವೊಮ್ಮೆ ಮಳೆ ಕೈಕೊಟ್ಟರೆ ಬೆಳೆಗಳೆಲ್ಲಾ ನಾಶವಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಆದ್ರೆ ಇಲ್ಲೊಬ್ಬ ರೈತ ಇತರರಿಗೆ ಮಾದರಿಯಾಗುವಂತೆ ಕೃಷಿ ಮಾಡ್ತಾ ಇದ್ದಾರೆ ಎಂದ್ರೆ ನೀವು ಆಶ್ಚರ್ಯ ಪಡ್ತೀರಾ.
ಹೌದು, ಮಧುಗಿರಿ ತಾಲೂಕಿನ ಗಡಿಭಾಗ ದೊಡ್ಡಮಾಲೂರು ಗ್ರಾಮದ ನಿವಾಸಿ, ಎಂಜಿನಿಯರ್ ಕೆ. ಅಂಜಿನಪ್ಪ ಎಂಬ ರೈತ, ಕೃಷಿ ಭೂಮಿಯಲ್ಲಿ ಮಳೆ ನೀರು ಪೋಲಾಗದಂತೆ ಮಾವಿನ ಬೆಳೆಗೆ ಅನುಕೂಲಕರ ನೀರಿನ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಅಲ್ದೇ ಇವರು ಬೆಳೆದ ಮಾವನ್ನು ಬೆಂಗಳೂರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾ ಇದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ.
ಇನ್ನು ಅಂಜಿನಪ್ಪ ದೇವನಹಳ್ಳಿ ಬಳಿ ಇದ್ದ ಅವರ ಜಮೀನನ್ನು ಏರ್ಪೋರ್ಟ್ ನಿರ್ಮಾಣದ ವೇಳೆ ಕಳೆದುಕೊಂಡಿದ್ರು. ಹೀಗಾಗಿ ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದಲ್ಲಿ ಸುಮಾರು 40 ಎಕರೆ ಜಮೀನು ಖರೀದಿಸಿದ್ರು. ಆರಂಭದಲ್ಲಿ ಬೋರ್ವೆಲ್ಗಳ ನೀರಿನಿಂದಾಗಿ 4,300 ಮಾವಿನ ಗಿಡಗಳನ್ನು ನೆಟ್ಟಿದ್ದರು. ಆದ್ರೆ ಮಾವಿನ ಗಿಡಗಳಿಗೆ ನೀರಿನ ಅಭಾವ ಹೆಚ್ಚಾಯ್ತು. ಹೀಗಾಹಿ ಮತ್ತೆರಡು ಕೊಳವೆ ಬಾವಿಯನ್ನು ಕೊರೆಸಿದ್ರು. ಇಷ್ಟು ನೀರು ಸಾಲದು ಅಂತಾ ರೈತ ಆಂಜಿನಪ್ಪ, ಪರ್ಯಾಯ ಮಾರ್ಗ ಹುಡುಕಿ 1 ಕೋಟಿ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಾಣ ಮಾಡಿ ಮಳೆ ನೀರು ಪೋಲಾಗದಂತೆ ನೀರನ್ನು ಶೇಖರಣೆ ಮಾಡಲು ಮುಂದಾಗಿದ್ದಾರೆ.
ಹೌದು ತೋಟಗಾರಿಕೆ ಮಿಷನ್ ಯೋಜನೆಯಡಿ ಸುಮಾರು 12 ಲಕ್ಷ ವೆಚ್ಚದಲ್ಲಿ 53 ಮೀಟರ್ ಉದ್ದ, 53 ಮೀಟರ್ ಆಳದ ಕೃಷಿ ಹೊಂಡ ನಿರ್ಮಿಸಿದ್ದಾರೆ. ಈ ಕೃಷಿ ಹೊಂಡಕ್ಕೆ ಸರ್ಕಾರದಿಂದ ಸುಮಾರು 5 ಲಕ್ಷದ 30 ಸಾವಿರ ಸಬ್ಸಿಡಿ ಹಣ ಸಿಕ್ಕಿದ್ದು ಮಳೆ ನೀರನ್ನು ಶೇಖರಿಸಿ, ಮಾವಿನ ಗಿಡಗಳಿಗೆ ನೀರು ಹರಿಸಿ ಶ್ರಮಕ್ಕೆ ತಕ್ಕಂತೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡ್ತಿದ್ದಾರೆ.
ಇನ್ನು ರೈತ ಆಂಜಿನಪ್ಪ ತನ್ನ ತೋಟದ ಮಾವಿನ ಮರಗಳಿಗೆ ಯಾವುದೇ ರಾಸಾಯನಿಕವನ್ನು ಬಳಸದಿರೋದ್ರಿಂದ ಇವರು ಬೆಳೆಯುವ ಮಾವಿಗೆ ಸಖತ್ ಡಿಮ್ಯಾಂಡ್ ಇದೆ. ಹೀಗಾಗಿ ಬಹುತೇಕ ಗ್ರಾಹಕರು ಬೆಂಗಳೂರು, ಮೈಸೂರು , ತುಮಕೂರು ಚಿಕ್ಕಬಳ್ಳಾಪುರ ಹಾಗೂ ಆಂದ್ರಪ್ರದೇಶದಿಂದ ಬಂದು ನೇರವಾಗಿ ಖರೀದಿ ಮಾಡ್ತಾರಂತೆ.. ಜೊತೆಗೆ ಮಾವು ಮಂಡಳಿ ಹಾಗೂ ಅಂಚೆ ಇಲಾಖೆಯ ಸಹಕಾರದೊಂದಿಗೆ ಪೋಸ್ಟ್ ಡೆಲಿವರಿ ಸೌಲಭ್ಯವನ್ನು ಕೂಡ ಗ್ರಾಹಕರಿಗೆ ಕಲ್ಪಿಸಿದ್ದಾರಂತೆ.
ಅದೇನೆ ಆಗಲಿ, ಬರದ ನಾಡಲ್ಲಿ ಮಳೆಯ ಹನಿ ನೀರನ್ನು ವ್ಯರ್ಥ ಮಾಡದೇ ಮಾವಿನ ಬೆಳೆಗೆ ಉಪಯೋಗಿಸಿ ಲಕ್ಷ ಲಕ್ಷ ಸಂಪಾದನೆ ಮಾಡ್ತಾ ಇರೋದು ಮಾತ್ರ ಅಕ್ಕಪಕ್ಕದ ರೈತರಿಗೆ ಮಾದರಿಯಾಗಿದ್ದಾರೆ.. ಇನ್ನು ಇವರಂತೆ ಹಲವರು ಕೃಷಿ ಮಾಡಲು ಮುಂದಾಗಿದ್ದಾರೆ.