ಗುಬ್ಬಿ :
ಸುಪ್ರೀಂ ಕೋರ್ಟ್ ಆದೇಶದಂತೆ ನಮ್ಮ ರಾಜ್ಯ ನಾಗಮೋಹನ್ ದಾಸ್ ಆಯೋಗ ರಚಿಸಿದೆ. ಅದರಂತೆ ಸತ್ಯ ಶೋಧನಾ ಕಾರ್ಯಕ್ಕೆ ದತ್ತಾಂಶ ಗಣತಿ ಮಾಡಲು 2 ತಿಂಗಳ ಗಡುವು ಪಡೆದುಕೊಂಡಿದೆ. ಈ ವೇಳೆ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎ.ಕೆ ಮತ್ತು ಎ.ಡಿ ಅಂತ ಹೇಳದೆ ತಮ್ಮ ಮೂಲ ಜಾತಿಯ ಹೆಸರು ಬರೆಸಿ ದತ್ತಾಂಶ ಸಂಗ್ರಹಕ್ಕೆ ಅನುಕೂಲ ಮಾಡಿಕೊಡಿ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಗುಬ್ಬಿಯಲ್ಲಿ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದ.ಸಂ.ಸ ತಾಲ್ಲೂಕು ಘಟಕ ಆಯೋಜಿಸಿದ್ದ ಸಭೆಯ ಬಳಿಕ ಜಾಗೃತಿ ವಾಹನಕ್ಕೆ ಚಾಲನೆ ಹಾಗೂ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂವಿಧಾನದ ಶೇಕಡಾ 50 ರ ಮೀಸಲಿನಲ್ಲಿ ಪರಿಶಿಷ್ಟ ಜಾತಿಗೆ ಶೇಕಡಾ 15 ಮೀಸಲಾತಿ ವರ್ಗೀಕರಣ ಮಾಡಲಾಯಿತು. ಆದರೆ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೆ ವೈಜ್ಞಾನಿಕ ಹಂಚಿಕೆ ದೊರಕಿಲ್ಲ. ಶೇಕಡಾ 95 ರಷ್ಟು ಪರಿಶಿಷ್ಟ ಜಾತಿಯ ಜನರಿಗೆ ಇಂದಿಗೂ ಮೀಸಲಾತಿ ಸಿಕ್ಕಿಲ್ಲ. ಪ್ರತಿಯೊಬ್ಬರೂ ಅವರ ಮೂಲ ಜಾತಿ ಮಾದಿಗ, ಹೊಲೆಯ, ಕೊರಮ, ಕೊರಚ, ಭೋವಿ, ಲಂಬಾಣಿ, ಅಲೆಮಾರಿ ಹೀಗೆ ಅವರವರ ಮೂಲ ಜಾತಿಯ ಹೆಸರನ್ನು ಯಾವುದೇ ಹಿಂಜರಿಕೆ ಇಲ್ಲದೆ ಬರೆಸಿ ಎಂದು ಸಲಹೆ ನೀಡಿದರು.
ಇನ್ನು ದಸಂಸ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ ಮಾತನಾಡಿ, ನಗರ ಪ್ರದೇಶದಲ್ಲಿ ಜಾತಿಯ ಹೆಸರು ಹೇಳಲು ಹಿಂಜರಿಕೆ ಕಾಣುತ್ತದೆ. ಅಲ್ಲಿನ ನಮ್ಮ ಪರಿಶಿಷ್ಟ ಜಾತಿಯ ಬಂಧುಗಳು ಅವರ ಮೂಲ ಜಾತಿಯ ಹೆಸರು ನಮೂದಿಸಿ ಸಹಕರಿಸಿ ಅಂದರು.
ಇನ್ನು ಸಭೆಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ಎಚ್.ರಂಗನಾಥ್, ತಾಲ್ಲೂಕು ಸಮಿತಿಯ ಹೊಸಕೆರೆ ನರಸಿಂಹಮೂರ್ತಿ, ಬಸವರಾಜು, ಫಣೀಂದ್ರ, ಪಾತರಾಜು, ನಂಜುಂಡಯ್ಯ, ಬಿ ಇತರರು ಹಾಜರಿದ್ದರು.