ದೊಡ್ಡಬಳ್ಳಾಪುರ :
ತಾರಾ ಅವರು ನಟಿಸಿರೋ ಹೆಬ್ಬೆಟ್ ರಾಮಕ್ಕ ಎಂಬ ಸಿನಿಮಾದ ದೃಶ್ಯಗಳು ರಾಜ್ಯಾದ್ಯಂತ ಸಖತ್ ಸೌಂಡ್ ಮಾಡಿತ್ತು, ಆದರೆ ಆ ಸಿನಿಮಾಗಳ ದೃಶ್ಯಗಳನ್ನು ನೋಡಬೇಕು ಅಂದರೆ ಒಮ್ಮೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಪಂಚಾಯ್ತಿಗೆ ಒಮ್ಮೆ ಬನ್ನಿ, ಹೌದು ಹೆಸರಿಗೆ ಮಾತ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೆಂಡ್ತಿ ಆಗಿದ್ದಾರೆ. ಆದರೆ ಅಧಿಕಾರ, ದರ್ಬಾರ್ ಮಾತ್ರ ಗಂಡನದ್ದು ಎಂದು ಬೈರಸಂದ್ರ ಪಾಳ್ಯ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹೌದು ಕಳೆದ ತಿಂಗಳುಗಳ ಹಿಂದೆ ದೊಡ್ಡ ತುಮಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೈರಸಂದ್ರ ಪಾಳ್ಯ ಕೆರೆಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆಯನ್ನು ತಡೆಯುವ ಸಲುವಾಗಿ ಪಂಚಾಯ್ತಿಯ ಸದಸ್ಯರೆಲ್ಲರೂ ಒಮ್ಮತದಿಂದ ಸಭೆಯಲ್ಲಿ ಚರ್ಚೆ ನಡೆಸಿದ್ದರು. ಸಭೆಯಲ್ಲಿ ಊರಿನ ಗ್ರಾಮಸ್ಥರು ಮಾತ್ರ ಅವರ ಜಮೀನಿಗೆ ಮಾತ್ರ ಮಣ್ಣು ಎತ್ತುವುದನ್ನು ಮಾಡಬೇಕು. ಬಿಟ್ಟರೆ ಬೇರೆ ಯಾರು ಕೂಡ ಮಣ್ಣು ಸಾಗಾಣಿಕೆ ಮಾಡದ ಹಾಗೆ ಸರ್ವಾನುಮತದಿಂದ ಅಂಗೀಕರಿಸಿರುತ್ತಾರೆ. ಆದರೆ ಸುಮಾರು ವರ್ಷದಿಂದ ಕೆರೆಯಲ್ಲಿ ನೀರು ಖಾಲಿಯಾಗಿರೋದ್ರಿಂದ ಊಳು ಹೆಚ್ಚಾಗಿರುತ್ತೆ. ಹೀಗಾಗಿ ಊರಿನ ಗ್ರಾಮಸ್ಥರು ಸಭೆ ಮಾಡಿ ಖಾಲಿ ಕೆರೆಯಲ್ಲಿ ಮಣ್ಣನ್ನು ಎತ್ತಿಸಲು ಗ್ರಾಮ ಪಂಚಾಯ್ತಿ ಪಿಡಿಒ ಬಳಿ ಕೇಳ್ತಾರೆ. ಆದರೆ ಅವರು ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಉತ್ತರಿಸ್ತಾರೆ. ಹೀಗಾಗಿ ಗ್ರಾಮಸ್ಥರೇ ಕೆರೆಯಲ್ಲಿರೋ ಊಳನ್ನು ಎತ್ತಿಸಲು ನಿರ್ಧಾರ ಮಾಡಿದ್ದರು. ಊಳು ಎತ್ತೋದರಿಂದ ಮುಂದೆ ಮಳೆ ಆದರೆ ನೀರು ಸಂಗ್ರಹ ಹೆಚ್ಚಾಗುತ್ತೆ ಎಂದು ಕೆರೆಯಲ್ಲಿರೋ ಮಣ್ಣನ್ನು ಗ್ರಾಮಸ್ಥರು ತಮ್ಮ ಜಮೀನಿಗೆ ಸಾಗಿಸ್ತಿದ್ದಾರೆ. ಹೀಗಿರುವಾಗ ಪಂಚಾಯ್ತಿ ಅಧ್ಯಕ್ಷೆಯ ಪತಿ ಇದಕ್ಕೆ ವಿರೋಧಿಸುತ್ತಿದ್ದು ಪೊಲೀಸ್ ಠಾಣೆಗೆ ದೂರು ನೀಡ್ತಿದ್ದಾರೆ.
ಕೆರೆಯಲ್ಲಿ ಮಣ್ಣು ಎತ್ತುತ್ತಿರೋ ಜೆಸಿಬಿ ಮಾಲೀಕನ ವಿರುದ್ಧ ಹಾಗೂ ಮಣ್ಣು ಎತ್ತಿಸುತ್ತಿರೋ ಗ್ರಾಮಸ್ಥರ ವಿರುದ್ಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಒ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರೋದಿಲ್ಲ ಅಂತಾ ಹೇಳುವವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿರೋದು ಯಾಕೆ ಎಂದು ಗ್ರಾಮಸ್ಥರು ಪ್ರಶ್ನೆ ಮಾಡ್ತಿದ್ದು, ಇದಕ್ಕೆಲ್ಲಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿಯೇ ನೇರ ಕಾರಣ ಎಂದು ದೂರುತ್ತಿದ್ದಾರೆ.
ಕಳೆದ ಬಾರಿ ಪಂಚಾಯಿತಿ ವ್ಯಾಪ್ತಿಗೆ ಬರುವ ಗೆಜ್ಜೆಗದ ಹಳ್ಳಿ ಕೆರೆ ಬೇರೆಯವರು ಮಣ್ಣು ಸಾಗಾಣಿಕೆ ನೆಡೆದರೂ ಕೂಡ ತಲೆ ಕೆಡೆಸಿಕೊಳ್ಳದ ಅಧ್ಯಕ್ಷರು, ಅಧ್ಯಕ್ಷರ ಗಂಡ ಇದೀಗ ಬೈರಸಂದ್ರ ಪಾಳ್ಯದ ಕೆರೆ ಊಳು ಎತ್ತುವ ಬಗ್ಗೆ ಹಾಗೂ ಅಭಿವೃದ್ಧಿ ತಡೆಯುವ ವಿಚಾರದಲ್ಲಿ ತಲೆ ಹಾಕುತ್ತಿದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಅಲ್ಲದೇ ಜೆ.ಸಿ.ಬಿ ಭಾರ್ಗವ ಎನ್ನುವವರು ಹಿಂದುಳಿದ ವರ್ಗ ಎನ್ನುವ ಒಂದೇ ಕಾರಣ ನನ್ನ ಏಳಿಗೆ ಸಹಿಸದೆ ಅಧ್ಯಕ್ಷರ ಪತಿ ಮಂಜುನಾಥ್ ತನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಮೇಲ್ನೋಟಕ್ಕೆ ಎಲ್ಲ ಆರೋಪಗಳು ಪಂಚಾಯತಿಗೆ ಸಂಬಂಧವೇ ಇಲ್ಲದ ಪತಿ ಮಂಜುನಾಥ್ ವಿರುದ್ಧವಾಗಿದ್ದು ಇದರ ಸಲುವಾಗಿ ಬೈರಸಂದ್ರಪಾಳ್ಯ ಗ್ರಾಮಸ್ಥರು ಪಂಚಾಯಿತಿ ಬಳಿ ಧರಣಿಗೆ ಹೋದಾಗ ಸಮಸ್ಯೆ ಬಗೆ ಹರಿಸಲು pdo ಅಧಿಕಾರಿಯಾಗಲಿ ಮತ್ತು ಅಧ್ಯಕ್ಷರಾಗಲಿ ಗೈರು ಹಾಜರಾಗಿ ಬಾರದೆ ಇರುವುದು ಗ್ರಾಮಸ್ಥರ ಆರೋಪಗಳಿಗೆ ಪುಷ್ಟಿ ಕೊಟ್ಟಂತೆ ಆಗಿದೆ. ಪೊಲೀಸ್ ಸ್ಟೇಷನ್ಗೆ ಯಾವ ಹೊತ್ತಲ್ಲಿ ಬೇಕಾದರೂ ಹೋಗುವ ಪತಿರಾಯರು. ಇಷ್ಟು ಜನ ಬಂದರು ಬರಲೇ ಇಲ್ಲ. ಇವರ ದರ್ಬಾರ್ ಎಷ್ಟು ದಿವಸ ನೆಡೆಯುವುದೋ ನಾವು ನೋಡುತ್ತೇವೆ ಎಂದು ಕಿಡಿಕಾರುತ್ತಿದ್ದು, ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಮಣ್ಣು ಎತ್ತೋ ವಿಚಾರ ಯಾವ ಸ್ವರೂಪ ಪಡೆದುಕೊಳ್ಳುತ್ತೋ ಎಂದು ಕಾದುನೋಡಬೇಕಿದೆ.