ಅರ್ಕಾವತಿ ನದಿತುಮಕೂರು
ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಅರ್ಕಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದ್ದು. ಕೋಲಾರ,ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಕನಕಪುರದಿಂದ ಸುಮಾರು 45 ಕಿ.ಮೀ ದೂರವಿರುವ ಕಾವೇರಿ ನದಿಯನ್ನು ಸಂಗಮಿಸುತ್ತದೆ. ಆದರೆ ಇಂತಹ ಇತಿಹಾಸವುಳ್ಳ ನದಿಗೆ ಈಗ ಮಹಾಗಂಡಾಂತರ ಒಂದು ಎದುರಾಗಿದೆ.
ದೊಡ್ಡಬಳ್ಳಾಪುರ ನಗರದ ಹಾಗೂ ಇಡೀ ತಾಲ್ಲೂಕಿನ ಒಳ ಚರಂಡಿಯ ಮಲಮೂತ್ರಗಳು, ಕೈಗಾರಿಕಾ ಘಟಕಗಳು ಹಾಗೂ ಕಾರ್ಖಾನೆಗಳಿಂದ ಬರುತ್ತಿರುವ ವಿಷಯುಕ್ತ ನೀರು ನದಿಗೆ ಸೇರುತ್ತಿದೆ. ಇದರ ಪರಿಣಾಮ ನದಿಯ ನೀರು ಮನುಷ್ಯನ ವಿಕೃತಿಗೆ ಸಿಲುಕಿ ವಿಷವಾಗಿ ಬದಲಾಗಿ ಹೋಗಿದೆ.ಕೈಗಾರಿಕೆಗಳಿಂದ ಬರುವ ತ್ಯಾಜ್ಯದ ವಿಷಯುಕ್ತ ನೀರು ಹಾಗೂ ವಿಷ ಗಾಳಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡ ತುಮಕೂರು, ಹೊಸಹಳ್ಳಿ, ಹಾಗೂ ಚಿಕ್ಕತುಮಕೂರು ಈ ಭಾಗದ ರೈತರು, ಜನರು ಸೇರಿದಂತೆ ಜಾನುವಾರುಗಳು ಜೀವ ಭಯದಲ್ಲಿ ಜೀವನ ನಡೆಸುವ ದುರಂತ ಎದುರಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೇ ಈ ಗ್ರಾಮಗಳ ಕೆರೆಯ ಹಾಗೂ 18 ಕೊಳವೆಬಾವಿ ನೀರು ಕ್ರೋಮಿಯಂ, ಸೀಸ, ರಾಸಾಯನಿಕ ಅಂಶದಿಂದ ಕೂಡಿದ್ದು ಈ ನೀರು ಕುಡಿಯಲು, ಬಳಸಲು ಸೂಕ್ತವಿಲ್ಲವೆಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಕೆರೆ ಮೂಲ ಉಳಿಸಲು ಇಲ್ಲಿನ ನಾಗರಿಕರು ಅರ್ಕಾವತಿ ಹೋರಾಟ ಸಮಿತಿ ರಚಿಸಿ ಸಾಕಷ್ಟು ಹೋರಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ.
ಇಲ್ಲಿನ ಜನ ಹತ್ತಾರು ಕಾಯಿಲೆಗಳಿಂದ ಬಳಲುವ ಸ್ಥಿತಿ ನಿರ್ಮಾಣವಾಗಿ ಕಿಡ್ನಿ ಫೇಲ್ಯೂರ್,ಅಸ್ತಮಾ, ಅಲರ್ಜಿ, ಚರ್ಮವ್ಯಾದಿ ನಾನಾ ಕಾರಣಗಳಿಂದ ಜನರು ಸಾಯುತ್ತಿದ್ದಾರೆ. 6 ತಿಂಗಳಿನಿಂದ ಸುತ್ತಮುತ್ತ ಗ್ರಾಮಗಳಲ್ಲಿ ಚಿಕ್ಕವಯಸ್ಸಿಗೆ ಅಂದರೆ 30 ರಿಂದ 50 ವರ್ಷದ ವಯಸ್ಸಿನ ಜನರು ಶೇಕಡಾ 100 ರಲ್ಲಿ 30 ಪರ್ಸೆಂಟ್ ರಷ್ಟು ಮರಣಾಂತಿಕಾ ಕಾಯಿಲೆಗಳಿಂದ ಮರಣ ಹೊಂದಿದ್ದಾರೆ. ಈ ಭಾಗದ ಪ್ರತಿ ಮನೆಯಲ್ಲೂ ಮಕ್ಕಳು ಸೇರಿದಂತೆ ಹಲವರು ವಿಚಿತ್ರ ಕಾಯಿಲೆಗಳಲ್ಲಿ ಬಳಲುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಹಸು. ಕುರಿ. ಮೇಕೆಗಳು ಕೆರೆಯ ನೀರು ಕುಡಿದು ವಿಚಿತ್ರ ಕಾಯಿಲೆಗೆ ತುತ್ತಾಗಿವೆ,ಹಸುವಿನಲಿ ಗರ್ಭ ದೋಷ, ಕೂದಲು ಉದುರುವಿಕೆ,ಸಾಕಷ್ಟು ಸಮಸ್ಯೆಗಳು ಜೊತೆಗೆ ಇದರಲ್ಲಿ ಬರುವ ಹಾಲು ಕೂಡ ವಿಷಯುಕ್ತವಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ಎಷ್ಟು ಬಾರಿ ತಂದರು ಪ್ರಯೋಜನವಾಗದೆ ರೋಸಿಹೋದ ಜನ ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಿ ಕೆರೆಗೆ ಇಳಿದು ಧರಣಿ ಮಾಡಿದಾಗ ಜಿಲ್ಲಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಇಲಾಖೆಯವರು,ಇವರ ಮನವೊಲಿಸಿ ಭರವಸೆ ನೀಡಿ ಧರಣಿ ನಿಲ್ಲಿಸಿ ಮತದಾನ ಮಾಡುವಂತೆ ಮಾಡಿದ ಮಹನೀಯರು ಇದುವರೆಗೂ ಈ ಭಾಗಕ್ಕೆ ಬಂದಿಲ್ಲವೆಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇದರ ಪರಿಣಾಮ ಜನವರಿ 26 ರ ಗಣರಾಜ್ಯೋತ್ಸವ ದಿನ ಪ್ರತಿ ಮನೆ ಮೇಲೆ ಕಪ್ಪು ಬಾವುಟ ಹಾರಿಸಿ ತಮ್ಮ ಆಕ್ರೋಶ ಹೊರ ಹಾಕಲಿದ್ದಾರೆ.