TUMAKURU : ಜಿಲ್ಲಾಸ್ಪತ್ರೆಯ ಶ್ರೀ ಏಜೆನ್ಸಿ ಹಗರಣಕ್ಕೆ ಇತಿಶ್ರೀ ಹಾಡುತ್ತಾ ಲೋಕಾಯುಕ್ತ?

ತುಮಕೂರು ಜಿಲ್ಲಾಸ್ಪತ್ರೆ
ತುಮಕೂರು ಜಿಲ್ಲಾಸ್ಪತ್ರೆ
ತುಮಕೂರು

ತುಮಕೂರು : 

ಬಡರೋಗಿಗಳ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ತುಮಕೂರಿನ ಜಿಲ್ಲಾಸ್ಪತ್ರೆ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಭ್ರಷ್ಟಾಚಾರದ ಕೂಪವಾಗಿ ಬದಲಾಗಿಬಿಡ್ತಾ? ಹೌದು.. ಜಿಲ್ಲೆಯ ಜನರಿಗೆ ಇಂತಹದ್ದೊಂದು ಅನುಮಾನ ಶುರುವಾಗಿ ಎಷ್ಟೋ ದಿನಗಳು ಕಳೆದುಹೋಗಿವೆ. ಜಿಲ್ಲಾಸ್ಪತ್ರೆಯ ಕರ್ಮಕಾಂಡಗಳ, ಅಲ್ಲಿನ ಕೆಲವು ಹಗರಣಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಸಾಲುಸಾಲು ವರದಿಗಳನ್ನ ಬಿತ್ತರಿಸುತ್ತಲೇ ಬಂದಿದೆ. ಜಿಲ್ಲಾಸ್ಪತ್ರೆಗೆ ಹೋಗೋದೇ ಬಡೋರು. ಇಂತಹ ಬಡರೋಗಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನ ಕೂಡ ಅಧಿಕಾರಿಗಳ ಕಣ್ಣಿಗೆ ಕಟ್ಟುವಂತೆ ತೋರಿಸ್ತಾ ಬಂದಿದೆ. ಆದ್ರೆ ಜಿಲ್ಲಾಧಿಕಾರಿಯಾಗಿರಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಿರಲಿ, ಆರೋಗ್ಯ ಸಚಿವರು ಕೂಡ ಈ ಬಗ್ಗೆ ಯಾವುದೇ ಗಮನಹರಿಸಿರಲಿಲ್ಲ. ಆದ್ರೆ ಇದೀಗ ಜಿಲ್ಲಾಸ್ಪತ್ರೆಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪದಡಿ ಜಿಲ್ಲಾಸ್ಪತ್ರೆಯ ೧೨ ಮಂದಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಜಿಲ್ಲಾಸ್ಪತ್ರೆಯ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಹಲವು ಮಾಧ್ಯಮಗಳು ವರದಿಯನ್ನ ಬಿತ್ತರಿಸುತ್ತಲೇ ಬರ್ತಿವೆ. ಸಾರ್ವಜನಿಕರೂ ಈ ಬಗ್ಗೆ ಮಾತನಾಡೋದಕ್ಕೆ ಶುರುಮಾಡಿದ್ದಾರೆ. ಆದ್ರೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಎಲ್ಲಾ ಗೊತ್ತಿದ್ದೂ ಜಾಣಮೌನವನ್ನ ವಹಿಸಿದ್ರು. ಆದ್ರೆ ಇದೀಗ ಈ ಪ್ರಕರಣ ಲೋಕಾಯುಕ್ತ ಕಚೇರಿಯನ್ನ ತಲುಪಿದೆ. ಜಿಲ್ಲಾಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಟೆಂಡರ್‌, ಹೊರಗುತ್ತಿಗೆ ನೌಕರರ ನೇಮಕ, ಉಪಕರಣಗಳು, ಸಲಕರಣೆಗಳು ಮತ್ತು ಪೀಠೋಪಕರಣಗಳ ಖರೀದಿಯಲ್ಲಿ ಆಸ್ಪತ್ರೆಯ ಕೆಲ ವೈದ್ಯಾಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಸೇರಿಕೊಂಡು ಬಹುಕೋಟಿ ನಡೆಸಿರುತ್ತಾರೆ. ಹಾಗೂ ಖರೀದಿ ಮಾಡದೇ ನಕಲಿ ಬಿಲ್‌ಗಳನ್ನ ಸೃಷ್ಟಿಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಜಿಲ್ಲಾಸ್ಪತ್ರೆಯ ಒಟ್ಟು ೧೨ ಮಂದಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಇಬ್ಬರು ನಿವೃತ್ತ ಡಿಎಸ್‌ ಹಾಗೂ ಹಾಲಿ ಡಿಎಸ್‌ ಸೇರಿ ಒಟ್ಟು ೧೨ ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಅಷ್ಟೇ ಅಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿರೋ, ಜೊತೆಗೆ ಈ ಬ್ರಹ್ಮಾಂಡ ಭ್ರಷ್ಟಾಚಾರದ ಕಿಂಗ್‌ ಪಿನ್‌ ಅಂತಲೇ ಹೇಳಲಾಗ್ತಿರೋ ಮೊನ್ನೆಮೊನ್ನೆಯವರೆಗೂ ಜಿಲ್ಲಾಸ್ಪತ್ರೆಯ ಟೆಂಡರ್‌ ಅನ್ನ ಹೊಂದಿದ್ದ ವ್ಯಕ್ತಿಯ ವಿರುದ್ಧವೂ ದೂರು ದಾಖಲಾಗಿದೆ.

ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ರಂಗನಾಥ್‌, ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಸರ್ಕಾರಿ ಹಣವನ್ನ ದುರುಪಯೋಗ ಮಾಡಿಕೊಳ್ಳಬಹುದು ಎಂಬ ದುರುದ್ದೇಶದಿಂದಲೇ ತನ್ನ ಮಗ ಮತ್ತು ಕುಟುಂಬದವರ ಹೆಸರಲ್ಲಿ ಶ್ರೀ ಏಜೆನ್ಸಿ ಎಂಬ ಕಂಪನಿಯನ್ನ ಮಾಡಿಕೊಂಡು ಕಳೆದ ಹದಿನೈದು ವರ್ಷಗಳಿಂದ ಹೊರಗುತ್ತಿಗೆ ನೌಕರರ ನೇಮಕ, ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಔಷಧಿಗಳು, ಪರಿಕರಗಳು, ಉಪಕರಣ, ಸಲಕರಣೆ, ಪೀಠೋಪಕರಣ ಸರಬರಾಜು ಮಾಡಿ ಬಹುಕೋಟಿ ಹಗರಣ ನಡೆಸಿದ್ದಾರೆ. ಕರ್ನಾಟಕ ಪಾರದರ್ಶಕ ಅಧಿನಿಯಮದ ನಿಯಮಾವಳಿಗಳು ಹಾಗೂ ಟೆಂಡರ್‌ ನಿಯಮಾವಳಿಗಳನ್ನ ಮೀರಿ ತನ್ನ ಪ್ರಭಾವ ಬಳಸಿ ಅಧಿಕಾರಿಗಳಿಗೆ ಹಣದ ಆಮಿಷ ನೀಡಿ ತನ್ನ ಕುಟುಂಬದ ಒಡೆತನದ ಶ್ರೀ ಏಜೆನ್ಸಿ ಮೂಲಕ ಕಳೆದ ೧೫ ವರ್ಷಗಳಿಂದ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಈ ರಂಗನಾಥ್‌ ಆರೋಗ್ಯ ಇಲಾಖೆಯಲ್ಲಿ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ೧೬ ಅಂಶಗಳ ಮೂಲಕ ಎಳೆಎಳೆಯಾಗಿ ವಿವರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ ವಿಚಾರವಾಗಿ ನಿವೃತ್ತ ಡಿಎಸ್‌ ಡಾ.ವೀರಭದ್ರಯ್ಯ, ಡಾ.ವೀಣಾ, ಹಾಲಿ ಡಿಎಸ್‌ ಆಗಿ ಕೆಲಸ ಮಾಡುತ್ತಿರುವ ಡಾ.ಆಸ್ಘರ್‌ ಬೇಗ್‌, ಡಾ.ನಾಗೇಂದ್ರಪ್ಪ, ರಂಗನಾಥ್‌, ರವಿಕುಮಾರ್‌, ರಮೇಶ್‌, ಶ್ರೀದೇವಿ ಚಂದ್ರಿಕಾ, ನಾರಾಯಣಸ್ವಾಮಿ, ಹರೀಶ್‌, ಮಾನಸಾ, ತಾಜುನ್ನಿಸಾ ಎಂಬುವವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಕೊನೆಗೂ ತುಮಕೂರು ಜಿಲ್ಲಾಸ್ಪತ್ರೆಯ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತೊಂದು ಹಂತವನ್ನ ತಲುಪಿದ್ದು, ಕರ್ನಾಟಕ ಲೋಕಾಯುಕ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಈ ಭ್ರಷ್ಟಾಚಾರವನ್ನ ಬಯಲಿಗೆಳೆಯುತ್ತಾ ಅನ್ನೋದನ್ನ ಕಾದುನೋಡ್ಬೇಕಿದೆ.

Author:

...
Sub Editor

ManyaSoft Admin

share
No Reviews