ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾದರು. ವಿಚಾರಣೆಯ ನಂತರ, ಕೋರ್ಟ್ ಆವರಣದಿಂದ ಹೊರಬರುವಾಗ ಪವಿತ್ರಾ ಗೌಡ ಅವರು ದರ್ಶನ್ ಅವರ ಕೈ ಹಿಡಿದುಕೊಂಡು ಹೊರಟ ದೃಶ್ಯ ಗಮನ ಸೆಳೆದಿದೆ.
ಇಂದು ಪವಿತ್ರಾ ಗೌಡ ಬಿಳಿ ಬಣ್ಣದ ಸೀರೆ ಧರಿಸಿದ್ದರೆ, ದರ್ಶನ್ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಂಡುಬಂದರು. ದರ್ಶನ್ ತಮ್ಮ ಸ್ನೇಹಿತ ಧನ್ವೀರ್ ಜೊತೆ ಕೋರ್ಟ್‌ಗೆ ಆಗಮಿಸಿದ್ದರು. ವಿಚಾರಣೆ ಆರಂಭವಾದಾಗ ಅವರು ದೂರದಲ್ಲಿ ನಿಂತಿದ್ದು, ಹೆಸರನ್ನು ಕರೆದಾಗಲೂ ಮುಂದೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಜಡ್ಜ್ ಅವರಿಬ್ಬರೂ (ದರ್ಶನ್ ಮತ್ತು ಪವಿತ್ರಾ) ಒಟ್ಟಿಗೆ ನಿಲ್ಲುವಂತೆ ಸೂಚಿಸಿದರು.
ಇಂದಿನ ವಿಚಾರಣೆಗೆ ಎ3 ಪವನ್ ಗೈರಾಗಿದ್ದರೆ, ಎ11 ನಾಗರಾಜು ಅವರಿಗೆ ಹೊಸಪೇಟೆ ಕೇಸ್‌ಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಉಳಿದ ಆರೋಪಿಗಳು ಕೋರ್ಟ್‌ಗೆ ಹಾಜರಾದರೂ, ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಯಿತು. ಈ ಹಿನ್ನೆಲೆ, ಮುಂದಿನ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಲಾಗಿದೆ. ಕೋರ್ಟ್ ಪವಿತ್ರಾ ಗೌಡಗೆ 15 ದಿನ ಹೊರರಾಜ್ಯಕ್ಕೆ ತೆರಳಲು ಅವಕಾಶ ನೀಡಿದೆ.
ಕಳೆದ ಬಾರಿ ಅನಾರೋಗ್ಯದ ಕಾರಣ ಹೇಳಿ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಜರಾಗದ್ದಕ್ಕೆ ಕೋರ್ಟ್ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ಪಡೆದರೂ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ದರು