Uttara kannada: ಕರುನಾಡಿಗೆ ಕರಾಳ ಬುಧವಾರ … ಪ್ರತ್ಯೇಕ ಅಪಘಾತದಲ್ಲಿ 15 ಮಂದಿ ದುರ್ಮರಣ

ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 11 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದ ಬಳಿ ಸಂಭವಿಸಿದೆ. ನಸುಕಿನ ಜಾವ ದಟ್ಟ ಮಂಜು ಆವರಿಸಿದ್ದರಿಂದ ಈ ದುರಂತ ಸಂಭವಿಸಿದೆ. ತರಕಾರು ತುಂಬಿದ್ದ ಲಾರಿ ಸವಣೂರಿನಿಂದ ಕುಮುಡಾಗೆ ತೆರಳುತ್ತಿದ್ದು, ತರಾಕಾರಿ ತುಂಬಿದ್ದ ಲಾರಿಯಲ್ಲಿ 25 ಮಂದಿ ಪ್ರಯಾಣ ಮಾಡ್ತಾ ಇದ್ರು ಎನ್ನಲಾಗಿದೆ. ಇನ್ನು ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ರೆ 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತದಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕ್ರೇನ್‌ಗಳ ಮೂಲಕ ಶವಗಳನ್ನು ಹೊರತೆಗೆಯಲಾಗಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡಿರೋ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಡೆಸಲಾಗ್ತಿದೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಇನ್ನು ಈ ಅಪಘಾತದಲ್ಲಿ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಹಾವೇರಿ ಜಿಲ್ಲೆಯ ಸವಣೂರಿನ ಅಸ್ಲಂ ಬಾಬುಲಿ ಎಂಬ ಯುವಕನೂ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ರಾಯಚೂರು ಜಿಲ್ಲೆ ಸಿಂಧನೂರು ನಗರದ ಹೊರವಲಯದಲ್ಲಿ ಬೆಳ್ಳಂ ಬೆಳಗ್ಗೆ ಟೈರ್‌ ಸ್ಪೋಟಗೊಂಡು ಕ್ರೂಶರ್‌ ವಾಹನ ಪಲ್ಟಿಯಾಗಿ ನಾಲ್ವರು ಉಸಿರು ನಿಲ್ಲಿಸಿದ್ದಾರೆ. ಮಂತ್ರಾಲಯದ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳು ಹಂಪಿಯ ನರಹರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೊರಟಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕ್ರೂಸರ್‌ ಚಾಲಕ ಶಿವ, ಮಂತ್ರಲಾಯದ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಅಯ್ಯವಂದನ್‌, ಸುಜೇಂದ್ರ ಹಾಗೂ ಅಭಿಲಾಷ್‌ ಎಂಬುವವರು ಅಸುನೀಗಿದ್ದು, 10 ಮಂದಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಸಂಬಂಧ ಸಿಂಧನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಅಪಘಾತದಲ್ಲಿ 15 ಮಂದಿ ಮೃತಪಟ್ಟಿರೋದಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರೋ ಸಿಎಂ, ಮೃತರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರದ ಭರವಸೆ ನೀಡಿದ್ರು.

 

Author:

share
No Reviews