ಕೊರಟಗೆರೆ :
ಬೇಸಿಗೆ ಆರಂಭವಾಗ್ತಿದ್ದಂತೆ ತುಮಕೂರು ಜಿಲ್ಲೆಯಲ್ಲಿ ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು, ತೋಟಗಳು ಬೆಂಕಿಗಾಹುತಿಯಾಗುತ್ತಿವೆ. ಜೊತೆಗೆ ಜನ ಜಾನುವಾರುಗಳು ತತ್ತರಿಸಿ ಹೋಗಿವೆ. ಕೊರಟಗೆರೆಯಲ್ಲಿ ಜನವರಿಯಿಂದ ಈವರೆಗೂ ಸುಮಾರು ಮೂರರಿಂದ ನಾಲ್ಕು ಬೆಂಕಿ ದುರಂತ ಸಂಭವಿಸಿದೆ. ಇಂದು ಕೂಡ ಮತ್ತೊಂದು ಬೆಂಕಿ ದುರಂತ ಸಂಭವಿಸಿದೆ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಮದಲ್ಲಿ ತಡರಾತ್ರಿ ತೋಟದ ಮನೆಯಲ್ಲಿದ್ದ ಹಸು ಶೆಡ್ಡಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಬೆಂಕಿಯ ತೀವ್ರತೆಗೆ ಶೆಡ್ ನಲ್ಲಿ ಕಟ್ಟಿಹಾಕಲಾಗಿದ್ದ 5 ಹಸುಗಳು ಹಾಗೂ ಒಂದು ಕರು ಸಜೀವ ದಹನವಾಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿವೆ.
ತೋವಿನಕೆರೆ ಗ್ರಾಮದ ರೈತ ಕೊಂಡಪ್ಪ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿದ್ದ ಹಸು ಶೆಡ್ ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅನಾಹುತದಿಂದಾಗಿ 2 ಲಕ್ಷ ಮೌಲ್ಯದ 5 ಹಸುಗಳು ಹಾಗೂ ಒಂದು ಕರು ಸ್ಥಳದಲ್ಲಿಯೇ ಸಜೀವ ದಹನವಾಗಿದೆ. ಅಲ್ಲದೇ ಶೆಡ್‌ನಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ. ಇನ್ನು ಶೆಡ್ಡಿಗೆ ವಿದ್ಯುತ್ ಸಂಪರ್ಕವೂ ಇಲ್ಲ, ಎಣ್ಣೆ ದೀಪ ಸಹ ಹಚ್ಚಿಲ್ಲ ಆದರೂ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಕಿ ಅನಾಹುತದಿಂದ ಜೀವನ ಆಧಾರಕ್ಕೆಂದು ಇದ್ದ ಹಸುಗಳನ್ನು ಕಳೆದುಕೊಂಡು ರೈತ ಕೊಂಡಪ್ಪ ಕುಟುಂಬ ಕಣ್ಣೀರಾಕುತ್ತಿದೆ. ಸ್ಥಳಕ್ಕೆ ಪಶು ಇಲಾಖೆ ಸಹಾಯ ನಿರ್ದೇಶಕ, ಕಂದಾಯ ಇಲಾಖೆ ಅಧಿಕಾರಿ ಪ್ರತಾಪ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ರೈತ ಕುಟುಂಬ ಆಗ್ರಹಿಸುತ್ತಿದೆ.