ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿ ಬುಧವಾರ ಮದ್ಯಾಹ್ನ ಹೊಸ ವರ್ಷದ ಪ್ರಯುಕ್ತ ಶಾಲಾ ಮಕ್ಕಳಿಗೆ ಟೊಮ್ಯಾಟೋ ಬಾತ್ ಹಾಗೂ ಹೆಸರುಬೇಳೆ ಪಾಯಸ ಸಿದ್ಧಪಡಿಸುವ ವೇಳೆ ಕುಕ್ಕರ್ ಬ್ಲಾಸ್ಟ್ ಆಗಿ ಸ್ಥಳದಲ್ಲಿದ್ದ ಅಡುಗೆ ಸಿಬ್ಬಂದಿಯರಿಗೆ ಗಂಭೀರ ಗಾಯಗಳಾಗಿದೆ.
ಅಡುಗೆ ಸಿಬ್ಬಂದಿ ಮೇಲೆ ನೀರು ಹಾಗೂ ಬೇಳೆ ಸಿಡಿದು ಉಮಾದೇವಿ ಗಂಭೀರ ಗಾಯಗೊಂಡಿದ್ದು, ದೇಹದ ಶೆ.೩೦ರಷ್ಟು ಭಾಗ ಸುಟ್ಟು ಗಾಯವಾಗಿದೆ. ಇನ್ನು ಮತ್ತೋರ್ವ ಅಡುಗೆ ಸಿಬ್ಬಂದಿ ಜಯಮ್ಮ ಎಂಬುವವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ತಕ್ಷಣ ಗಾಯಾಳುಗಳನ್ನ ಗೊಂದಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಶಾಲೆಯಲ್ಲಿ ಗುಣಮಟ್ಟದ ಕುಕ್ಕರ್ ಕೊಡದೇ ಇರುವುದೇ ಈ ಘಟನೆಗ ಮುಖ್ಯ ಕಾರಣ ಎನ್ನಲಾಗಿದೆ. ಈ ಬಗ್ಗೆ ಗಾಯಾಳು ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ಈ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.