ಚಿಂತಾಮಣಿ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಬಾಲಕರ ಶಾಲೆಯಲ್ಲಿ ನಿರ್ಮಿಸಿದ್ದ ವಿವಾದಿತ ಡಾ.ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ತಾಲೂಕು ಆಡಳಿತ ಬಿಗಿಪೊಲೀಸ್ ಬಂದೋ ಬಸ್ತ್‌ನಲ್ಲಿ ರಾತ್ರೋರಾತ್ರಿ ತೆರವುಗೊಳಿಸಿರುವ ಘಟನೆ ನಡೆದಿದೆ.
ಶಾಲಾ ಆವರಣದಲ್ಲಿ ನಿರ್ಮಿಸಿದ್ದ ಅಂಬೇಡ್ಕರ್ ಪುತ್ಥಳಿಗೆ ಕೊಳಕು ಬಟ್ಟೆ ಸುತ್ತಲಾಗಿದೆ, ಆ ಬಟ್ಟೆಯನ್ನು ತೆರವುಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂದು ದಲಿತಪರ ಸಂಘಟನೆಗಳು ಒತ್ತಾಯಿಸಿದ್ದವು. ಇದಾದ ಕೆಲವು ತಿಂಗಳ ಬಳಿಕ ಇದೀಗ ದಿಢೀರನೇ ತಾಲೂಕು ಆಡಳಿತ ಅಂಬೇಡ್ಕರ್ ಪುತ್ಥಳಿಯನ್ನು ತೆರವುಗೊಳಿಸಿರುವುದು ದಲಿತಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೋರ್ಟ್ ನ ಆದೇಶದಂತೆ ಬುಧವಾರ ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಅಂಬೇಡ್ಕರ್ ರವರ ಪುತ್ಥಳಿಯನ್ನು ತೆರವುಗೊಳಿಸಲಾಗಿದೆ ಎನ್ನಲಾಗುತ್ತಿದೆ. ಇತ್ತ ಬೆಳಿಗ್ಗೆ 4 ಗಂಟೆ ಸಮಯದಲ್ಲಿ ಅಂಬೇಡ್ಕರ್ ರವರ ಪುತ್ಥಳಿ ತೆರವುಗೊಳಿಸಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಹರಡುತ್ತಿದ್ದಂತೆ, ದಲಿತಪರ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಧಾವಿಸಿ ತಾಲೂಕು ಆಡಳಿತ ವಿರುದ್ದ ಕಿಡಿಕಾರಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.