BANGALORE NEWS : ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ದುರಂತ ಕಾಲ್ತುಳಿತ ಪ್ರಕರಣದ ವಿರುದ್ಧ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ, “ಸರ್ಕಾರ ತನ್ನ ಪ್ರಚಾರದ ತೆವಲಿಗೆ ಸೂಕ್ತವಾದ ವ್ಯವಸ್ಥೆ ಮಾಡದೇ, ಆತುರಾತುರದಲ್ಲಿ ಕಾರ್ಯಕ್ರಮ ನಡೆಸಿ ಅಮಾಯಕರ ಬಲಿಯನ್ನು ಪಡೆದುಕೊಂಡಿದೆ. ಇದರ ನೈತಿಕ ಹೊಣೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಇದೆ. ಅವರು ತಕ್ಷಣ ರಾಜೀನಾಮೆ ನೀಡಬೇಕು,” ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಮುಖ್ಯಮಂತ್ರಿ ನಿವಾಸದ ಕಡೆಗೆ ಮುತ್ತಿಗೆ ಹಾಕಲು ಮುಂದಾದಾಗ, ಪೊಲೀಸರಿಂದ ತಡೆ ಸಿಕ್ಕಿತು. ಫ್ರೀಡಂ ಪಾರ್ಕ್‌ನಲ್ಲೇ ನುಕುನುಗ್ಗಾಟ ನಡೆಯಿತು. ನಂತರ ಪೊಲೀಸರು ಹಲವರನ್ನು ವಶಕ್ಕೆ ಪಡೆದು, ಬಿಎಂಟಿಸಿ ಬಸ್‌ಗಳಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು. ಪ್ರತಿಭಟನೆಯ ವೇಳೆ ಅಲ್ಪ ಕಾಲ ಮಳೆ ಸುರಿದ ಕಾರಣದಿಂದ ಕಾರ್ಯಕ್ರಮ ಮೊಟಕುಗೊಂಡಿತು. ಆದರೆ, ಪ್ರತಿಭಟನೆಯಲ್ಲಿ ಹಲವು ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.
ಈ ಬೃಹತ್ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸಚೇತಕ ರವಿಕುಮಾರ್ ಸೇರಿದಂತೆ ಹಲವು ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.