ಚಿಕ್ಕನಾಯಕನಹಳ್ಳಿ :
ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ತಿಂಗಳ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಚಾಲುಕ್ಯ ಆಸ್ಪತ್ರೆ ಎದುರು ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ತಾಲೂಕಿನ ಕುಪ್ಪೂರು ಗ್ರಾಮದ ಬಾಣಂತಿ ಸಿಂಧೂಗೆ ವಾಂತಿಯಾಗಿದ್ದು, ಚಾಲುಕ್ಯ ಆಸ್ಪತ್ರೆಗೆ ನಿನ್ನೆ ಮಧ್ಯಾಹ್ನ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರು ನಿಮ್ಮ ಮಗಳು ಆರೋಗ್ಯವಾಗಿದ್ದಾರೆ ಎಂದು ಪೋಷಕರಿಗೆ ತಿಳಿಸಿದ್ದರಂತೆ, ಬಾಣಂತಿ ಏನು ತಿಂದಿಲ್ಲ ಹಾಗಾಗಿ ಸುಸ್ತಾಗಿದ್ದಾರೆ. ನಾವು ಜ್ಯೂಸ್ ಕೊಟ್ಟಿದ್ದೇವೆ ಈಗ ಸುಧಾರಿಸಿಕೊಳ್ತಾ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಮಾತಿನಿಂದ ಪೋಷಕರು ಸ್ವಲ್ಪ ಸಮಾಧಾನ ಆಗಿ ನಂತರ ಮಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗ್ತೇವೆ ಎಂದು ಪೋಷಕರು ಕೇಳಿದ್ದಾರೆ. ಆದರೆ ಬಾಣಂತಿ ಆರಾಮಾಗಿದ್ದಾರೆ, ತೊಂದರೆ ಇಲ್ಲ ಎಂದಿದ್ದಾರೆ. ನಂತರ ಮನೆಗೆ ಹೋಗಿ ಗಂಜಿ ತೆಗೆದುಕೊಂಡು ಬರುವಷ್ಟರಲ್ಲಿ ಫೋನ್ ಮಾಡಿ ನಿಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ ಅಂತಾ ವೈದ್ಯರು ಹೇಳಿದ್ದಾರೆ ಎಂದು ಬಾಣಂತಿ ಸಿಂಧೂ ತಂದೆ ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿವರೆಗೂ ಚಿಕಿತ್ಸೆ ನೆಪವೊಡ್ಡಿ ಬಾಣಂತಿಯನ್ನು ಉಳಿಸಿಕೊಂಡಿದ್ದು, ಬಳಿಕ ತುಮಕೂರಿಗೆ ಕರೆದುಕೊಂಡು ಹೋಗಿ ಅಂತಾ ಸಿಬ್ಬಂದಿ ಹೇಳಿದ್ದಾರೆ. ಈ ಮೊದಲು ನಾವು ತುಮಕೂರಿಗೆ ಕರೆದುಕೊಂಡು ಹೋಗ್ತೀವಿ ಅಂತಾ ಕೇಳಿದಾಗ ಬೇಡ ಎಂದ ಆಸ್ಪತ್ರೆ ಸಿಬ್ಬಂದಿ ರಾತ್ರಿ ಮೇಲೆ ಹೀಗೆ ಹೇಳ್ತಾ ಇದ್ದಾರೆ, ನಮ್ಮ ಮಗಳ ಈ ಸ್ಥಿತಿಗೆ ಚಾಲುಕ್ಯ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಆಸ್ಪತ್ರೆ ಮುಂದೆ ತಡರಾತ್ರಿವರೆಗೂ ಪ್ರತಿಭಟನೆ ನಡೆಸಿ ಪೋಷಕರು ಆಕ್ರೋಶ ಹೊರಹಾಕಿದರು.
ಪ್ರತಿಭಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ ಬಾಣಂತಿಯನ್ನು ಕಳೆದುಕೊಂಡ ಪೋಷಕರು ಎರಡು ತಿಂಗಳ ಮಗು ತಾಯಿ ಕಳೆದುಕೊಂಡು ಅನಾಥವಾಗಿದೆ ಎಂದು ಕಣ್ಣೀರು ಹಾಕಿ ಆಕ್ರೋಶ ಹೊರಹಾಕಿದ್ದಾರೆ.