ಚಿಕ್ಕಬಳ್ಳಾಪುರ :
ಕಾರಿನ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಪಲ್ಟಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ಬಳಿ ಈ ಅಪಘಾತ ನಡೆದಿದ್ದು, ಸಮತಾ ಸೈನಿಕ ದಳದ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಕೀಲ ಸ್ನೇಹಿತರೊಂದಿಗೆ ಬಾಗೇಪಲ್ಲಿಗೆ ಹೋಗಿ ಬೆಂಗಳೂರಿಗೆ ವಾಪಸ್ ತೆರಳುವಾಗ ಗುಡಿಬಂಡೆ ಬಳಿಯ ವರ್ಲಕೊಂಡ ಬಳಿ ಕಾರಿನ ಟೈರ್ ಬ್ಲಾಸ್ಟ್ ಆಗಿದ್ದು, ಇನ್ನೋವಾ ಕಾರು ಹತ್ತು ಬಾರಿ ಪಲ್ಟಿಯಾಗಿ, ಹಳ್ಳಕ್ಕೆ ಕಾರು ಉರುಳಿದೆ. ಅಪಘಾತದ ರಭಸಕ್ಕೆ ಚನ್ನಕೃಷ್ಣಪ್ಪ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರೆ, ಕಾರಿನಲ್ಲಿದ್ದ ವಕೀಲನಿಗೂ ಗಾಯಗಳಾಗಿದ್ದು ಅಪಘಾತವಾಗ್ತಿದ್ದಂತೆ ಎಸ್ಕೇಪ್ ಆಗಿದ್ದಾರೆ.
ಇನ್ನು ಅಪಘಾತದ ಬಗ್ಗೆ ಮೃತ ಚನ್ನಕೃಷ್ಣಪ್ಪ ಅವರ ಮಗ ಅನುಮಾನ ವ್ಯಕ್ತಪಡಿಸಿದ್ದು, ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆರೇಸಂದ್ರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು.
ಅಪಘಾತದ ಬಳಿಕ ವಕೀಲ ಪರಾರಿಯಾಗಿದ್ದು, ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಕೊಲೆಯೋ. ಆಕಸ್ಮಿಕ ಸಾವೋ ಎಂದು ಅನುಮಾನ ವ್ಯಕ್ತವಾಗಿದ್ದು, ಪೊಲೀಸರ ತನಿಖೆ ಬಳಿಕ ಸತ್ಯ ಹೊರಬೀಳಲಿದೆ.