
ಶಾಸಕ ಪ್ರದೀಪ್ ಈಶ್ವರ್ ಗೊಲ್ಲಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸುತ್ತಿರುವುದು.ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರದ ಯುವ ಶಾಸಕ, ಮಾತಿನಮಲ್ಲ ಮಾತಿನ ವರಸೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳಿಗೂ ಕೈಜೋಡಿಸಿದ್ದಾರೆ ಶಾಸಕ ಪ್ರದೀಪ್ ಈಶ್ವರ್. ಚಿಕ್ಕಬಳ್ಳಾಪುರ ಜಿಲ್ಲೆಯ ಗೊಲ್ಲಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಐದು ಹಳ್ಳಿಗಳಿಗೆ ಭೇಟಿ ನೀಡಿ, ಗ್ರಾಮಸ್ಥರಿಂದ ಅಹವಾಲು ಸ್ವೀಕಾರ ಮಾಡಿದರು. ಗ್ರಾಮಕ್ಕೆ ಶಾಸಕ ಪ್ರದೀಪ್ ಈಶ್ವರ್ ವಿಸಿಟ್ ಮಾಡ್ತಾ ಇದ್ದಂತೆ ಸ್ಥಳೀಯರು ಹೂಮಳೆ ಸುರಿಸಿ, ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಗೊಲ್ಲಹಳ್ಳಿ ಪಂಚಾಯಿತಿ ತುಂಬಾ ಹಿಂದುಳಿದಿದೆ. ಇಲ್ಲಿಗೆ ಬಂದ ತಕ್ಷಣ ರಸ್ತೆ ಅಭಿವೃದ್ದಿಗೊಳಿಸುವಂತೆ ಜನರ ಮನವಿ ಮಾಡಿದ್ದಾರೆ. ಹೀಗಾಗಿ ಈ ಭಾಗದ ರಸ್ತೆ ಅಭಿವೃದ್ದಿಗೆ ಶೀಘ್ರದಲ್ಲಿಯೇ ನಾಲ್ಕು ಕೋಟಿ ಅಪ್ರೂವಲ್ ಗೆ ಶಿಪ್ಪಾರಸ್ಸು ಮಾಡುತ್ತೇನೆ ಎಂದರು.
ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಹಿಂದೆ ಸುಧಾಕರ್ ಅವರು ಶಾಸಕರಾಗಿದ್ದ ವೇಳೆ ರೈತರು ಸಾಗುವಳಿ ಮಾಡಿಕೊಳ್ಳುತಿದ್ದ 20 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಅರಣ್ಯ ಇಲಾಖೆಗೆ ವಾಪಸ್ಸಾಗುವಂತೆ ಮಾಡಿದ್ದಾರೆ. ಅರಣ್ಯ ಇಲಾಖೆ ರಾಜ್ಯ ಸರ್ಕಾರದ ಹದ್ದುಬಸ್ತಿಗೆ ಬರೋಲ್ಲ. ಆದರೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉಸ್ತುವಾರಿ ಸಚಿವರ ಸಹಕಾರದಿಂದ 4.5 ಎಕರೆ ಜಮೀನನ್ನು ರೈತರಿಗೆ ವಾಪಸ್ಸು ಮಾಡಿಸುವಂತೆ ಕ್ರಮ ಜರುಗಿಸಿದ್ದೇವೆ ಎಂದರು.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವ ವಿಚಾರವಾಗಿ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದ್ದು, ಒಂದೆರಡು ದಿನ ಮಾತ್ರ ಪ್ರತಿಭಟನೆ ಮಾಡುವುದನ್ನು ಬಿಟ್ಟು, ವಿಜಯೇಂದ್ರ ಅವರು 6 ತಿಂಗಳುಗಳ ಕಾಲ ಹನಿ ನೀರು ಕುಡಿಯದಂತೆ ಉಪವಾಸ ಸತ್ಯಾಗ್ರಹ ಮಾಡಲಿ ನೋಡೋಣ ಎಂದು ಬಿಜೆಪಿ ಪ್ರತಿಭಟನೆ ಬಗ್ಗೆ ವ್ಯಂಗ್ಯವಾಡಿದರು. ಅಲ್ಲದೇ ಯಾವುದೇ ಊರಿಗೆ ಹೋದರೂ ನನ್ನನ್ನು ಹೆಚ್ಚಾಗಿ ಮಾತನಾಡಿಸೋದು ದಲಿತರೇ, ಅವರ ಪರವಾಗಿಯೇ ನಾನು ಇರ್ತೇನೆ, ಅವರಿಗಾಗಿ ಜೀವ ಕೊಡ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ನನ್ನ ದೇವರು ಎಂದು ದಲಿತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾತನಾಡಿದರು.