ಚಿಕ್ಕಬಳ್ಳಾಪುರ :
ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವರಂತೆ. ಆದರೆ ಇಲ್ಲೊಬ್ಬ ಅಳಿಯ ಕೋಪದ ಕೈಗೆ ಬುದ್ದಿ ಕೊಟ್ಟು ಹಣಕ್ಕಾಗಿ ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದಿದ್ದಾನೆ. ಸಾಲದ ಹಣ ವಾಪಸ್ ಕೊಡಲಿಲ್ಲವೆಂದು ಮಾವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕಾರು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಬಳಿ ಫೆಬ್ರವರಿ 27ರಂದು ನಡೆದಿದ್ದು, ಮಾವನನ್ನು ಕೊಂದ ಅಳಿಯನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಬಾಗೇಪಲ್ಲಿ ಪಟ್ಟಣದ ಶ್ರೀನಿವಾಸ್ ಎಂಬುವವರ ಮಗಳನ್ನು ಬಾಲಕೃಷ್ಣ ಪ್ರೀತಿಸಿ ಮದುವೆಯಾಗಿದ್ದ. ಇಬ್ಬರು ಅನ್ಯೋನ್ಯವಾಗಿ ಸಂಸಾರ ಮಾಡ್ತಾ ಇದ್ದರು. ಜೊತೆಗೆ ಅಳಿಯ- ಮಾವ ಇಬ್ಬರು ಕೂಡ ಚೆನ್ನಾಗಿಯೇ ಇದ್ದರು. ಆದರೆ ಹಣದ ವಿಷಯಕ್ಕೆ ಇಬ್ಬರ ಸಂಬಂಧ ಕೊಲೆಯಲ್ಲಿ ಅಂತ್ಯವಾಗಿದೆ. ಇತ್ತ ಅಪ್ಪ ಮಸಣಕ್ಕೆ ಸೇರಿದರೆ, ಗಂಡ ಜೈಲುಪಾಲಾಗಿದ್ದಾನೆ.
ಮಾವನನ್ನು ಕೊಂದ ಕೊಲೆ ಆರೋಪಿ ಬಾಲಕೃಷ್ಣ, ಶ್ರೀನಿವಾಸ್ ಅವರ ಎರಡನೇ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಬಾರ್ನಲ್ಲಿ ಸಫ್ಲೆಯರ್ ಆಗಿ ಮಾವ ಶ್ರೀನಿವಾಸ್ ಕೆಲಸ ಮಾಡ್ತಾ ಇದ್ದ. ಮಾವನಿಗೆ ಸೈಟು ಖರೀದಿಗಾಗಿ ಅಳಿಯ ಬಾಲಕೃಷ್ಣ ಹಣದ ಸಹಾಯ ಮಾಡಿದ್ದ. ಬಾಲಕೃಷ್ಣ ಹೆಂಡ್ತಿ ಹರ್ಷಿತಾಳಿಗೆ ಗೊತ್ತಿಲ್ಲದಂತೆ ಆಕೆಯ ಒಡವೆಯನ್ನು ಅಡವಿಟ್ಟು ಶ್ರೀನಿವಾಸ್ಗೆ ಸುಮಾರು 4 ಲಕ್ಷ ಸಾಲ ನೀಡಿದ್ದ, ಕೆಲ ತಿಂಗಳ ಬಳಿಕ ಬಾಲಕೃಷ್ಣ ಹೆಂಡ್ತಿ ಹರ್ಷಿತಾ ಒಡವೆ ವಿಚಾರವಾಗಿ ಟಾರ್ಚರ್ ಕೊಡ್ತಾ ಇದ್ದಳಂತೆ. ಇತ್ತ ಮಾವ ಶ್ರೀನಿವಾಸ್ ಸಾಲವನ್ನು ವಾಪಸ್ ಕೊಡದೇ ಸೈಟೂ ತೋರಿಸದೇ ಸತಾಯಿಸ್ತಾ ಇದ್ದ. ಇದರಿಂದ ಕೋಪಗೊಂಡ ಅಳಿಯ ಬಾಲಕೃಷ್ಣ, ಬಾರ್ ಬಳಿ ಹೋಗಿ ನಿಮ್ಮ ಮಗಳಿಗೆ ನಾನು ನಿಮಗೆ ಒಡವೆ ಹಣ ಕೊಟ್ಟಿದ್ದೀನಿ ಅಂತಾ ಹೇಳಿ ಎಂದು ಮಾವ ಶ್ರೀನಿವಾಸ್ನನ್ನು ಕರೆದುಕೊಂಡು ಬರುತ್ತಿದ್ದ. ಬಾಗೇಪಲ್ಲಿಯಿಂದ ಬರುವಾಗ ಮಾರ್ಗ ಮಧ್ಯೆ ಅಳಿಯ ಹಾಗೂ ಮಾವನಿಗೆ ಗಲಾಟೆಯಾಗಿದೆ. ಈ ವೇಳೆ ಕೋಪದ ಕೈಗೆ ಬುದ್ದಿಕೊಟ್ಟ ಅಳಿಯ ಬಾಲಕೃಷ್ಣ ಮಾವ ಶ್ರೀನಿವಾಸ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕಾರಿನಿಂದ ಹತ್ತಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾವ ಶ್ರೀನಿವಾಸ್ನದ್ದು ಕೊಲೆನಾ. ಅಥವಾ ಅಪಘಾತನಾ ಅನ್ನೋ ಗೊಂದಲ ಪೊಲೀಸರಲ್ಲಿ ಮೂಡಿತ್ತು.
ಮಾವ ಶ್ರೀನಿವಾಸ್ ಸತ್ತರೂ ಅಂತ್ಯಕ್ರಿಯೆಗೆ ಅಳಿಯ ಬಾರದಿರೋದನ್ನು ಗಮನಿಸಿದ ಪೊಲೀಸರು, ಅಳಿಯ ಬಾಲಕೃಷ್ಣನನ್ನು ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಬಂಧಿಸಿದ್ದು, ವಿಚಾರಣೆಯಲ್ಲಿ ಮಾವ ಶ್ರೀನಿವಾಸ್ನನ್ನು ಕೊಲೆ ಮಾಡಿರುವ ಬಗ್ಗೆ ಬಾಲಕೃಷ್ಣ ತಪ್ಪೋಪ್ಪಿಕೊಂಡಿದ್ದಾನೆ, ಕೋಪದ ಕೈಗೆ ಬುದ್ದಿ ಕೊಟ್ಟ ಅಳಿಯ ಜೈಲುಪಾಲಾಗಿ ಮುದ್ದೆ ಮುರಿಯುತ್ತಿದ್ದಾನೆ.