ಬೆಂಗಳೂರು : ಖ್ಯಾತ ಸಾಹಿತಿ, ಗೀತರಚನೆ ಹಾಗೂ ಸಂಭಾಷಣೆಕಾರ 80 ವರ್ಷದ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಅವರು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೆಚ್. ಎಸ್ ವೆಂಕಟೇಶ್ ಮೂರ್ತಿ ಅವರು ಅನೇಕ ಚಿತ್ರಗಳಿಗೆ ಹಾಡುಗಳು, ಕಥೆ ಮತ್ತು ಸಂಭಾಷಣೆ ಬರೆದಿದ್ದ ಅವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ್ದ ವೆಂಕಟೇಶಮೂರ್ತಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ, ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದರು.
ಕಾದಂಬರಿ, ಕತೆ, ವಿಮರ್ಶೆ, ಕವನ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ, ರಂಗಭೂಮಿ ಹೀಗೆ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಹೆಚ್.ಎಸ್.ವೆಂಕಟೇಶ ಮೂರ್ತಿ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ಸಂಭಾಷಣೆಕಾರರಾಗಿಯೂ ಕೆಲಸ ಮಾಡಿದ್ದಾರೆ.
"ಕನ್ನಡದಲ್ಲಿ ಕಥನ ಕವನಗಳು" ಎಂಬ ಮಹಾಪ್ರಬಂಧ ಮಂಡಿಸಿ ಪಿಹೆಚ್ಡಿ ಪಡೆದಿದ್ದರು. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಿಂದ ಕನ್ನಡ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು 2000ದಲ್ಲಿ ನಿವೃತ್ತಿ ಹೊಂದಿದ್ದರು. ಇನ್ನು ಇಂದು ಇವರು ಆಗಲಿದ್ದು, ವೆಂಕಟೇಶಮೂರ್ತಿಯವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ಸಾಹಿತಿಯ ನಿಧನಕ್ಕೆ ಇಡೀ ರಾಜ್ಯ ಕಂಬನಿ ಮಿಡಿದಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.