ಸರಿಗಮ ವಿಜಿಕನ್ನಡ
ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ, ಹಾಸ್ಯ ಕಲಾವಿದ ಸರಿಗಮ ವಿಜಿ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಹಿರಿಯ ನಟ ಸರಿಗಮ ವಿಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದ ಸಮಸ್ಯೆ ಸರಿಗಮ ವಿಜಿ ಅವರನ್ನ ಕಾಡುತ್ತಿದ್ದು, ಚಿಕಿತ್ಸೆಗಾಗಿ ಸರಿಗಮ ವಿಜಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸರಿಗಮ ವಿಜಿ ಚಿರನಿದ್ರೆಗೆ ಜಾರಿದ್ದಾರೆ.
ಶ್ವಾಸಕೋಶದ ಸಮಸ್ಯೆ ಹಾಗೂ ನ್ಯೂಮೋನಿಯಾಗಾಗಿ ಸರಿಗಮ ವಿಜಿ ಅವರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, 76 ವರ್ಷ ವಯಸ್ಸಿನ ಸರಿಗಮ ವಿಜಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಇಂದು ಮಣಿಪಾಲ್ ಆಸ್ಪತ್ರೆಯಲ್ಲಿ ಸರಿಗಮ ವಿಜಿ ಕೊನೆಯುಸಿರೆಳೆದಿದ್ದಾರೆ.
ಸರಿಗಮ ವಿಜಿ ಅವರ ನಿಜನಾಮ ಆರ್ ವಿಜಯ್ ಕುಮಾರ್. ಆದರೆ, ರಂಗಭೂಮಿ ಹಾಗೂ ಸಿನಿಲೋಕದಲ್ಲಿ ಇವರು ‘ಸರಿಗಮ ವಿಜಿ’ ಎಂದೇ ಜನಪ್ರಿಯ. ಅದಕ್ಕೆ ಕಾರಣ ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ. ಆರ್ ವಿಜಯ್ ಕುಮಾರ್ ಅವರೇ ನಟಿಸಿ, ನಿರ್ದೇಶಿಸಿದ್ದು ಬಹು ಜನಪ್ರಿಯತೆ ಪಡೆದಿತ್ತು. 1975ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸರಿಗಮ ವಿಜಿ ಅಭಿನಯಿಸಿದ ಚೊಚ್ಚಲ ಸಿನಿಮಾ ‘ಬೆಳುವಲದ ಮಡಿಲಲ್ಲಿ’. ‘ದುರ್ಗಿ’, ‘ಡಕೋಟ ಎಕ್ಸ್ಪ್ರೆಸ್’ ಸೇರಿದಂತೆ ಸುಮಾರು 269ಕ್ಕೂ ಅಧಿಕ ಚಿತ್ರಗಳಲ್ಲಿ ಸರಿಗಮ ವಿಜಿ ಮಿಂಚಿದ್ದಾರೆ. 80ಕ್ಕೂ ಅಧಿಕ ಚಿತ್ರಗಳಿಗೆ ಸರಿಗಮ ವಿಜಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ನಿವಾಸಕ್ಕೆ ಸರಿಗಮ ವಿಜಿ ಪಾರ್ಥಿವ ಶರೀರವನ್ನ ಆಸ್ಪತ್ರೆಯಿಂದ ರವಾನಿಸಲಾಗುತ್ತದೆ. ನಾಳೆ (ಗುರುವಾರ, ಜನವರಿ 16) ಬೆಳಗ್ಗೆ 10 ರಿಂದ 12 ಗಂಟೆ ಹೊತ್ತಿಗೆ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.