ಬೆಂಗಳೂರು: ಪತಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು ನಗರ

ಬೆಂಗಳೂರು:

ಬೆಂಗಳೂರಿನ ಬಾಗಲಗುಂಟೆಯಲ್ಲಿ ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ಐದು ವರ್ಷದ ಮಗಳನ್ನು ಹತ್ಯೆ ಮಾಡಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ನಗರದ ಬಾಗಲಗುಂಟೆಯಲ್ಲಿ ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ತನ್ನ ಮನೆಯಲ್ಲಿಯೇ ಪತ್ನಿ ಶೃತಿ, ಮತ್ತು ಮಗಳು ರೋಹಿಣಿ ಸಾವನಪ್ಪಿದ್ದಾರೆ. ಶೃತಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ, ಏನು ಅರಿಯದ ತನ್ನ ಐದು ವರ್ಷದ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಯ್ಯ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.

ಗೋಪಾಲಕೃಷ್ಣ ಮತ್ತು ಶೃತಿ 10 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇತ್ತು. ಪತಿ ಗೋಪಾಲಕೃಷ್ಣ ಆಡಿಟಿಂಗ್‌ ಕೆಲಸ ಮಾಡ್ತಿದ್ದ. ಮೃತ ಪತ್ನಿ ಶೃತಿ ಪಾವಗಡದ ಗುಂಡಾರನಹಳ್ಳಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಗಂಡ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಡೆತ್‌ನೋಟ್‌ ಬರೆದಿಟ್ಟು ನಿನ್ನೆ ಸಂಜೆ ಏಕಾಏಕಿ ತನ್ನ ಮಗುವನ್ನೂ ಕೊಂದು ತಾನೂ ನೇಣಿಗೆ ಕೊರಳೊಡ್ಡಿದ್ದಾರೆ.

ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ಇಬ್ಬರ ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಸದ್ಯ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

Author:

share
No Reviews