ಬೆಂಗಳೂರು:
ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ, ಬಸ್ ಗುದ್ದಿದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್ ನಲ್ಲಿ ನಡೆದಿದೆ.
ಹೊಸಕೆರೆಹಳ್ಳಿ ಕ್ರಾಸ್ ನಲ್ಲಿ ಆಟೋಗೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದ್ದು, ಆಟೋ ಚಾಲಕ ತನ್ನ ಸೀಟ್ ನಲ್ಲೇ ಸಾವನ್ನಪ್ಪಿದರೆ ಆಟೋದಲ್ಲಿದ್ದ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಇದರ ಹಿಂದೆ ಬರುತ್ತಿದ್ದ ಆಟೋ ಬಸ್ಗೆ ಡಿಕ್ಕಿ ಹೊಡೆದಿದ್ದು ಅದೇ ಸಮಯಕ್ಕೆ ಹಿಂದೆ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಬಸ್ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಸಾರ್ವಜನಿಕರು ಆಟೋದಲ್ಲಿದ್ದ ಚಾಲಕ, ಪ್ರಯಾಣಿಕರನ್ನು ರಕ್ಷಿಸಲು ಧಾವಿಸಿದ್ದಾರೆ. ಆದ್ರೆ ಬಸ್ ನ ಸಂಪೂರ್ಣ ತೂಕ ಆಟೋ ಮೇಲೆ ಬಿದ್ದಿದರ ಪರಿಣಾಮ ಆಟೋದಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಿಎಂಟಿಸಿ ಬಸ್ ಜಪ್ತಿ ಮಾಡಿ ಚಾಲಕನನ್ನು ಸಹ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.