ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಬೆಳಗಾವಿ
ಬೆಳಗಾವಿ : ಕಾರು ಅಪಘಾತದಲ್ಲಿ ಬೆನ್ನು ಮೂಳೆ ಮುರಿದು ಆಸ್ಪತ್ರೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಕಿತ್ಸೆ ಪಡೆಯುತ್ತಿದ್ದು, ಈಗ ಹೇಗಿದ್ದಾರೆ ಎಂದು ಕಾರ್ಯಕರ್ತರಲ್ಲಿ, ಅಭಿಮಾನಿಗಳಲ್ಲಿ ಕುತೂಹಲ ಇತ್ತು, ಆದ್ರೀಗ ಆಸ್ಪತ್ರೆಯಲ್ಲಿರೋ ಹೆಬ್ಬಾಳ್ಕರ್ ಫೋಟೋಸ್ ವೈರಲ್ ಆಗಿದ್ದು, ಅಭಿಮಾನಿಗಳು ಕೊಂಚ ಸಮಾಧಾನಗೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಮಾರ್ಗ ಮಧ್ಯೆ ಸಂಕ್ರಾಂತಿ ಹಬ್ಬದ ದಿನ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಕಾರು ಅಪಘಾತವಾಗಿತ್ತು. ಅಪಘಾತದಲ್ಲಿ ಸಚಿವೆ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿದಿತ್ತು, ಅಲ್ದೇ ಸಣ್ಣ ಪುಟ್ಟ ಗಾಯಗಳಾಗಿತ್ತು. ಗಾಯಗೊಂಡ ಸಚಿವೆಯನ್ನು ಬೆಳಗಾವಿಯ ವಿಜಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಲು ಪಕ್ಷಾತೀತವಾಗಿ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.ನಿನ್ನೆ ರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಡಿಸಿಎಂ ಡಿ.ಕೆ ಶಿವಕುಮಾರ್, ಮೈಸೂರಿನ ಸುತ್ತೂರು ಮಠದ ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಿ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಸ್ತೆ ಅಪಘಾತದ ಕುರಿತು ಮಾಹಿತಿ ಪಡೆದು, ಆರೋಗ್ಯ ವಿಚಾರಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿ, ಆಶೀರ್ವದಿಸಿದರು. ಆಸ್ಪತ್ರೆಯಲ್ಲಿ ಸಚಿವೆ ಇರುವ ಫೋಟೋಸ್ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ, ಕಾರ್ಯಕರ್ತರಲ್ಲಿ ಸಮಾಧಾನ ತಂದಿದೆ.