ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಚರಿಸುತ್ತಿದ್ದ ಕಾರುಬೆಳಗಾವಿ
ಮಕರ ಸಂಕ್ರಾಂತಿ ಹಬ್ಬದ ದಿನವೇ ಭಾರೀ ಅಪಘಾತವೊಂದು ನಡೆದುಹೋಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಚರಿಸುತ್ತಿದ್ದ ಕಾರು ಅಪಘಾತವಾಗಿದ್ದು, ಅದೃಷ್ಟವಶಾತ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಿಎಲ್‌ಪಿ ಸಭೆಗೆ ಹಾಜರಾಗಿ ವಾಪಸ್ ರಸ್ತೆ ಮಾರ್ಗದ ಮೂಲಕ ಬೆಳಗಾವಿಗೆ ಆಗಮಿಸುವ ಸಂದರ್ಭದಲ್ಲಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಕಾರು ಮರಕ್ಕೆ ಡಿಕ್ಕಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರಿಗೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಚಿವೆ ಹೆಬ್ಬಾಳ್ಕರ್ ಹಾಗೂ ಚನ್ನರಾಜ್ ಹಟ್ಟಿಹೊಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಇಬ್ಬರನ್ನೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಖುದ್ದು ಸಚಿವೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ತಾಯಿ ಮತ್ತು ಮಾವನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮ್ಮನ ಬೆನ್ನಿಗೆ ಗಾಯಗಳಾಗಿದ್ದು, ಮಾವನ ಕಿವಿ ಮತ್ತು ತಲೆಗೆ ಗಾಯಗಳಾಗಿವೆ. ಸದ್ಯ ಇಬ್ಬರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಯಾರೂ ಪ್ಯಾನಿಕ್ ಆಗೋದು ಬೇಡ ಎಂದಿದ್ದಾರೆ.
ಇನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ರವಿ ಪಾಟೀಲ್ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿನ ಎಲ್‌೧, ಎಲ್‌೨ ಭಾಗಕ್ಕೆ ಪ್ರಾಕ್ಚರ್ ಆಗಿದೆ. ಚನ್ನರಾಜ್ ಹಟ್ಟಿಹೊಳಿಯವರಿಗೆ ಮೆದುಳು ಬಾವಿದೆ. ಗನ್ ಮ್ಯಾನ್ ಮತ್ತು ಡ್ರೈವರ್‌ಗೆ ಮೈನರ್ ಇಂಜುರಿಸ್ ಆಗಿವೆ ಎಂದು ತಿಳಿಸಿದ್ದಾರೆ.