ಬೆಳಗಾವಿ :
ಕೆಎಸ್ಆರ್ಟಿಸಿ ಕಂಡಕ್ಟರ್ ಮೇಲೆ ಮರಾಠಿ ಯುವಕರು ಹಲ್ಲೆ ಮಾಡಿದ ಘಟನೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಮರಾಠಿಗರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಮರಾಠಿಗರು ಕಂಡಕ್ಟರ್ ವಿರುದ್ಧ ಫೋಕ್ಸೊ ಪ್ರಕರಣ ದಾಖಲಿಸಿ, ಮಹಾರಾಷ್ಟ್ರ ಕರ್ನಾಟಕ ನಡುವೆ ಬಸ್ ಸೇವೆ ಸ್ಥಗಿತಗೊಳಿಸಿದ್ದಾರೆ.
ಈ ಘಟನೆ ಕನ್ನಡಿಗರನ್ನು ಕೆರಳಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗ್ರತಾವಾಗಿ ಮಹಾರಾಷ್ಟ್ರ, ಕರ್ನಾಟಕ ನಡುವೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಮತ್ತು ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ಮಾಡಿದೆ. ಹೀಗಾಗಿ ಕರ್ನಾಟಕದಿಂದ ಹೊರಡುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪ್ರತಿದಿನ 120 ಬಸ್ಗಳ ಸಂಚಾರ ನಡೆಸುತ್ತಿದ್ದು, ಸಂಜೆ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಅಲ್ಲದೆ ಬೆಂಗಳೂರಿನಿಂದ ಮುಂಬೈಗೆ ಹೊರಡುತ್ತಿದ್ದ ಎಂಎಸ್‌ಆರ್‌ಟಿಸಿ ಬಸ್ ಮೇಲೆ ಕನ್ನಡಪರ ಕಾರ್ಯಕರ್ತರು ದಾಳಿ ಮಾಡಿ, ಕಾರ್ಯಕರ್ತರು ಚಾಲಕ ಭಾಸ್ಕರ್ ಜಾಧವ್ ಅವರ ಮುಖಕ್ಕೂ ಕಪ್ಪು ಬಣ್ಣ ಬಳಿದು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರ ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸದ ಹೊರತು ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಪುನರಾರಂಭಿಸಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಆದೇಶಿಸಿದ್ದಾರೆ. ಇನ್ನೊಂದೆಡೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಚರಿಸುವ ಎಲ್ಲಾ ಬಸ್ ಸಹ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಬಸ್ ಕಂಡಕ್ಟರ್ ಮೇಲೆ ಮರಾಠಿಗರು ಫೊಕ್ಸೊ ಪ್ರಕರಣವನ್ನು ದಾಖಲಿಸಿದ್ದಾರೆ