ತುರುವೇಕೆರೆ:
ಇತ್ತೀಚಿನ ದಿನಗಳಲ್ಲಿ ಜನರಿಗೆ ಆನ್‌ಲೈನ್ ಶಾಪಿಂಗ್‌ನ ಗೀಳು ಹೆಚ್ಚಾಗಿದೆ. ಅಮೇಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ.. ಮತ್ತೊಂದು ಅಂತಾ ಜನರು ಮಾರುಹೋಗ್ತಿದ್ದಾರೆ. ಆನ್‌ಲೈನ್ ಆಪ್‌ಗಳಲ್ಲಿ ಆಫರ್ ಇರುತ್ತೆ. ಕಮ್ಮಿ ದರದಲ್ಲಿ ಐಟಂಗಳು ಸಿಗುತ್ತೆ ಅಂತಾ ಜನರು ಮುಗಿಬಿದ್ದು ಶಾಪಿಂಗ್ ಮಾಡ್ತಿದ್ದಾರೆ. ಹಬ್ಬಹರಿದಿನ ಬಂದ್ರಂತೂ ಆನ್‌ಲೈನ್ ಮಾರ್ಕೆಟಿಂಗ್ ಕಂಪನಿಗಳಿಗೆ ಹಬ್ಬವೋ ಹಬ್ಬ. ಜೊತೆಗೆ ಕೆಲವು ಕಂಪನಿಗಳು ಗ್ರಾಹಕರನ್ನ ವಂಚಿಸುವ ಕೆಲಸಗಳನ್ನ ಕೂಡ ಮಾಡ್ತಿವೆ. ಇದೇ ರೀತಿಯ ಪ್ರಕರಣ ಇದೀಗ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಮೊಬೈಲ್ ಆರ್ಡರ್ ಮಾಡಿದ್ದ ಗ್ರಾಹಕಿಗೆ ಅಮೇಜಾನ್ ಕಂಪನಿ ಪಾತ್ರೆ ತೊಳೆಯುವ ಸಾಬೂನನ್ನ ಪ್ಯಾಕ್ ಮಾಡಿ ಕಳುಹಿಸಿದ್ದು, ಪ್ಯಾಕ್ ಓಪನ್ ಮಾಡಿ ನೋಡಿದ ಗ್ರಾಹಕಿ ಮತ್ತು ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಸರಸ್ವತಿಪುರಂನಲ್ಲಿ ಅಮೇಜಾನ್ ಕಂಪನಿಯ ಈ ವಂಚನೆ ಬೆಳಕಿಗೆ ಬಂದಿದೆ. ಸರಸ್ವತೀಪುರಂನ ನಿವಾಸಿ ಜಯಶೀಲಾ ಎಂಬುವವರು ವಿವೋ ಕಂಪನಿಯ ವಿ೫೦ ಮೊಬೈಲನ್ನ ಅಮೇಜಾನ್ ಆಪ್‌ನಲ್ಲಿ ಬುಕ್ ಮಾಡಿದ್ರು. ಬರೋಬ್ಬರಿ ೩೨ ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ಇದಾಗಿದ್ದು, ಜಯಶೀಲಾ ಅವರು ಈಗಾಗಲೇ ಆನ್‌ಲೈನ್ ಪೇಮೆಂಟನ್ನ ಕೂಡ ಮಾಡಿಬಿಟ್ಟಿದ್ರು. ಬುಕ್ ಮಾಡಿದ ಮೂರು ದಿನಗಳಲ್ಲಿ ಆರ್ಡರ್ ಮನೆಬಳಿ ತಲುಪಿತ್ತು. ಅಮೇಜಾನ್ ಕಂಪನಿಯ ಡೆಲಿವರಿ ಬಾಯ್ ಆರ್ಡರ್ ತೆಗೆದುಕೊಂಡು ಬಂದಿದ್ದ. ಆತನ ಕಡೆಯೆ ಬಾಕ್ಸ್ ಓಪನ್ ಮಾಡಲು ಕೊಟ್ಟ ಜಯಶೀಲಾ ಅವರು ಬಾಕ್ಸ್ ಓಪನಿಂಗ್ ವಿಡಿಯೋ ಮಾಡ್ತಾ ಇದ್ರು. ಬಾಕ್ಸ್ ಓಪನ್ ಆಗ್ತಿದ್ದಂತೆ ಗ್ರಾಹಕಿ ಜಯಶೀಲಾ, ಡೆಲಿವರಿ ಬಾಯ್ ಸೇರಿ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದಾರೆ. ಕಾರಣ ಆ ಬಾಕ್ಸ್‌ನಲ್ಲಿ ಇದ್ದದ್ದು ನಾಲ್ಕು ಪಾತ್ರೆ ತೊಳಯುವ ಸಾಬೂನುಗಳು. ಅಷ್ಟೇ ಅಲ್ಲ ಜೊತೆಗೆ ಒಂದು ಪಾತ್ರೆ ತೊಳೆಯುವ ಸ್ಕ್ರಬ್ಬರ್ ಕೂಡ ಕಳುಹಿಸಿದೆ ಕಂಪನಿ.
ಬರೋಬ್ಬರಿ ೩೨ ಸಾವಿರ ರೂಪಾಯಿ ಆನ್‌ಲೈನ್ ಪೇಮೆಂಟ್ ಕೂಡ ಮಾಡಿ ಮೊಬೈಲ್ ಆರ್ಡರ್ ಮಾಡಿದ್ದ ಜಯಶೀಲಾ ಅವರು ಮೊಬೈಲ್ ಪ್ಯಾಕ್ ಒಳಗಿದ್ದ ಸಾಬೂನುಗಳನ್ನ ನೋಡಿ ಕಂಗಾಲಾಗಿದ್ದಾರೆ. ಪುಣ್ಯಕ್ಕೆ ವಿಡಿಯೋ ಮಾಡಿ ಬಾಕ್ಸ್ ಓಪನ್ ಮಾಡಿದ್ದಕ್ಕೆ ಬದುಕಿದ್ವಿ ಎಂದುಕೊಂಡವರೇ, ಸದ್ಯ ಈ ಕೋರಿಯರ್ ಹಿಂದಿರುಗಿಸಿ, ಹಣ ವಾಪಾಸ್ ಮಾಡುವಂತೆ ಕಂಪನಿಗೆ ರಿಕ್ವೆಸ್ಟ್ ಹಾಕಿದ್ದಾರೆ.
ಒಟ್ಟಿನಲ್ಲಿ ಅಮೇಜಾನ್ ಕಂಪನಿಯ ಎಡವಟ್ಟಿಗೆ ಗ್ರಾಹಕಿ ಜಯಶೀಲಾ ಸುಸ್ತಾಗಿದ್ದಾರೆ. ಆನ್‌ಲೈನ್ ಆಪ್‌ಗಳಲ್ಲಿ ಮುಗಿಬಿದ್ದು ಶಾಪಿಂಗ್ ಮಾಡೋರಿಗೆ ಇದೊಂದು ಪಾಠವಾಗಿದ್ದು, ಆನ್‌ಲೈನ್ ಆರ್ಡರ್ ಓಪನ್ ಮಾಡೋದಕ್ಕೂ ಮುನ್ನ ಎಚ್ಚರ ವಹಿಸಿ ವಿಡಿಯೋ ಮಾಡಿಟ್ಟುಕೊಳ್ಳೋದು ಉತ್ತಮ. ಇಲ್ಲವಾದ್ರೆ ವಂಚನೆಗೊಳಗಾಗೋದು ಪಕ್ಕಾ.