ಮಂಡ್ಯ:
ಉತ್ತರ ಪ್ರದೇಶ ರಾಜ್ಯದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಪ್ರತಿದಿನವೂ ಕೋಟ್ಯಂತರ ಜನರು ಗಂಗೆಯಲ್ಲಿ ಮಿಂದೇಳುತ್ತಿದ್ದಾರೆ. ಇತ್ತ ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ತ್ರಿವೇಣಿ ಸಂಗಮದಲ್ಲಿಯೂ ಈಗಾಗಲೇ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ.
ಪ್ರಯಾಗ್ ರಾಜ್ ಗೆ ಹೋಗಲಾಗದವರು ಕೆ.ಆರ್.ಪೇಟೆ ತಾಲೂಕಿನ ಹೇಮಾವತಿ, ಕಾವೇರಿ ಹಾಗೂ ಲಕ್ಷ್ಮಣತೀರ್ಥ ಮೂರೂ ಜೀವಂತ ನದಿಗಳು ಒಂದಾಗಿ ಸೇರುವ ಅಂಬಿಗರಹಳ್ಳಿ ಸಮೀಪದ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಾಕು, ಆರೋಗ್ಯ, ಸುಖ ಶಾಂತಿ, ಸಮೃದ್ಧಿ ಉಂಟಾಗುತ್ತದೆ ಎಂಬುದನ್ನು ಸ್ನಾನ ಮಾಡುವುದರ ಮೂಲಕ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ.
ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ನಾನು ಪ್ರಯಾಗ್ ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ಕೆ.ಆರ್.ಪೇಟೆ ತಾಲೂಕಿನ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಬೇಕೆಂಬ ಆಸೆಯಿತ್ತು, ಅದು ಇಂದು ಈಡೇರಿದೆ ಎಂದರು. ಈ ಕ್ಷೇತ್ರದಲ್ಲಿ ಹಿಂದೆ ಕುಂಭಮೇಳ ನಡೆಸಿದ್ದನ್ನು ನಾವು ಸ್ಮರಿಸಬಹುದಾಗಿದೆ. ಪವಾಡ ಪುರುಷರಾದ ಶ್ರೀ ಮಲೈ ಮಹದೇಶ್ವರರು ಬಾಲಕರಾಗಿದ್ದಾಗ ಪವಾಡ ಮಾಡಿದ ಪುಣ್ಯ ಕ್ಷೇತ್ರವೇ ಈ ಪವಿತ್ರ ತ್ರಿವೇಣಿ ಸಂಗಮವಾಗಿದೆ ಎಂದು ಹೇಳಿದರು.
ಈ ಕ್ಷೇತ್ರದ ಬಗ್ಗೆ ಹೇಳಬೇಕೆಂದರೆ, ನಿಸರ್ಗ ರಮಣೀಯ ಮಾತ್ರವಲ್ಲದೆ, ದೈವಿಕ ಕ್ಷೇತ್ರವೂ ಇದಾಗಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಕೊಡಗು, ಮೈಸೂರು, ಹಾಸನಕ್ಕಾಗಿ ಹರಿದು ಅಂಬಿಗರಹಳ್ಳಿಗೆ ಬರುವ ಕಾವೇರಿಗೆ ದಕ್ಷಿಣ ಕೊಡಗಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಇರ್ಪು ಮೂಲಕ ಧುಮುಕಿ ನಾಗರಹೊಳೆ ಅರಣ್ಯಕ್ಕಾಗಿ ಹರಿದು ಮೈಸೂರು ಮೂಲಕ ಹರಿದು ಅಂಬಿಗರಹಳ್ಳಿಯಲ್ಲಿ ಕಾವೇರಿಯನ್ನು ಸಂಗಮವಾಗುತ್ತದೆ.
ಈ ನದಿಗಳು ಕೊಡಗಿನಲ್ಲಿ ಉತ್ತರ ಮತ್ತು ದಕ್ಷಿಣದಲ್ಲಿ ಹುಟ್ಟಿ ಪ್ರತ್ಯೇಕವಾಗಿ ಹರಿದು ಬಂದು ಇಲ್ಲಿ ಸಂಗಮವಾಗುವುದೇ ವಿಶೇಷ. ಇನ್ನು ಇವೆರಡು ನದಿಗೆ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮಘಟ್ಟದ ಶ್ರೇಣಿಯಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಮೂಲಕ ಹರಿದು ಬರುವ ಹೇಮಾವತಿ ನದಿ ಕೂಡ ಅಂಬಿಗರಹಳ್ಳಿ ಬಳಿಯೇ ಸಂಗಮವಾಗುತ್ತದೆ. ಒಟ್ಟಾರೆ ಈ ಮೂರು ನದಿಗಳು ಸಂಗಮವಾಗುವ ಈ ಕ್ಷೇತ್ರಕ್ಕೆ ದಕ್ಷಿಣ ಕಾಶೀ ಎಂದು ಕರೆಯುತ್ತಾರೆ.