ಬೆಂಗಳೂರು:
ಕಾಂಗ್ರೇಸ್ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ತಂದಿದೆ. ಇದೀಗ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ತಿದ್ದುಪಡಿ ಮಾಡಲು ತೀರ್ಮಾನಿಸಿದೆ. ಅನರ್ಹ ಮಹಿಳೆಯರನ್ನು ಗುರುತಿಸಿ ಅವರ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಹಣ ವಿತರಣೆ ಮಾಡಲು ಮುಂದಾಗಿದೆ.
ಈ ಹಿಂದೆ ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರು ಹಣ ಪಡೆಯುತ್ತಿದ್ದರು, ಆದರೆ ಇದರಲ್ಲಿ ಸುಮಾರು 2 ಲಕ್ಷ ಮಹಿಳೆಯರು ತೆರಿಗೆ ಪಾವತಿಸುತ್ತಿದ್ದಾರೆ, ಹಾಗೂ ಜಿಎಸ್ ಟಿ ಸಂಖ್ಯೆಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಕೆಲವು ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದರೂ ಯೋಜನೆಯ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಪರಿಶೀಲನೆ ಸಭೆ ನಡೆಸುತ್ತಿದೆ. ಹಾಗೂ ಫಲಾನುಭವಿಗಳ ಆದಾಯ ವಿವರಗಳನ್ನು ಮತ್ತೆ ಪರಿಶೀಲಿಸುವ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಈ ಮೂಲಕ ರಾಜ್ಯ ಸರ್ಕಾರವು ಯೋಜನೆ ಸದುಪಯೋಗವನ್ನು ಸುಸೂತ್ರವಾಗಿ ನಡೆಸಲು ಸರ್ಕಾರ ಯೋಚಿಸಿದೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಬಿಪಿಎಲ್ , ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿಯಾಗಿ ಹೆಸರು ಇರುವ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರಾಗುತ್ತಾರೆ. ಜೊತೆಗೆ, ಕುಟುಂಬದ ಯಜಮಾನಿ ಅಥವಾ ಪತಿ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ, ಅವರಿಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.