TUMAKURU: ತುಮಕೂರಿನಲ್ಲಿ ಬಜಾಜ್‌ ಪೈನಾನ್ಸ್‌ ದಬ್ಬಾಳಿಕೆ! ಕಚೇರಿಯಲ್ಲೇ ಯುವಕನ ಪ್ರತಿಭಟನೆ

ಕಚೇರಿಯಲ್ಲಿ ಯುವಕನ ಪ್ರತಿಭಟನೆ
ಕಚೇರಿಯಲ್ಲಿ ಯುವಕನ ಪ್ರತಿಭಟನೆ
ತುಮಕೂರು

 ತುಮಕೂರು :

ಇತ್ತೀಚೆಗೆ ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್‌ ಕಂಪನಿಗಳ ಹಾವಳಿಗೆ ಜನರು ಕಂಗಾಲಾಗ್ತಿರೋ ಬಗ್ಗೆ ಸಾಲು ಸಾಲು ವರದಿಯಾಗುತ್ತಿದೆ. ಇದೀಗ ತುಮಕೂರಿನಲ್ಲಿ ಪ್ರತಿಷ್ಠಿತ ಬಜಾಜ್‌ ಫೈನಾನ್ಸ್‌ ಕಂಪನಿ ತನ್ನ ಗ್ರಾಹಕರ ಮೇಲೆ ದಬ್ಬಾಳಿಕೆ ನಡೆಸುತ್ತಿರೋ ವಿಚಾರ ಬೆಳಕಿಗೆ ಬಂದಿದೆ. 

ತುಮಕೂರು ನಗರದ ಮುಬಾರಕ್‌ ಎಂಬ ಯುವಕ ಕಳೆದ ವರ್ಷದ ಆರಂಭದಲ್ಲಿ ಬಜಾಜ್‌ ಫೈನಾನ್ಸ್‌ನಿಂದ ಸಾಲ ಪಡೆದು ಇಎಂಐ ಆಧಾರದ ಮೇಲೆ ಮೊಬೈಲ್ ಖರೀದಿಸಿದ್ದ. ಒಟ್ಟು ಆರು ಕಂತುಗಳಲ್ಲಿ ಸಾಲವನ್ನ ಮರುಪಾವತಿ ಮಾಡಬೇಕಿತ್ತು. ಮುಬಾರಕ್‌ ಈಗಾಗಲೇ ನಾಲ್ಕು ಕಂತುಗಳನ್ನ ಕಟ್ಟಿದ್ದು, ಇನ್ನೆರಡು ಕಂತುಗಳನ್ನ ಕಟ್ಟಬೇಕಿತ್ತು. ಆದ್ರೆ ಹಣದ ಸಮಸ್ಯೆಯಿಂದ  ಐದು ಮತ್ತು ಆರನೇ ಕಂತನ್ನ ಕಟ್ಟಿರಲಿಲ್ಲ. ಮೂರು ತಿಂಗಳಾದ್ರೂ ಕಂತು ಕಟ್ಟದೇ ಇದ್ದ ಕಾರಣ ಬಜಾಜ್‌ ಫೈನಾನ್ಸ್‌ನ ರಿಕವರಿ ಸಿಬ್ಬಂದಿ ಏಕಾಏಕಿ ಯಾವುದೇ ನೋಟಿಸ್‌ ಕೂಡ ನೀಡದೇ ಮೊಬೈಲ್‌ ತೆಗೆದುಕೊಂಡು ಹೋಗಿದ್ದರು.

ಮೊಬೈಲ್‌ನಲ್ಲಿ ಅವಶ್ಯಕ ದಾಖಲೆಗಳೆಲ್ಲ ಇದ್ದ ಕಾರಣ, ಎರಡು ದಿನಗಳ ನಂತರ  ಮುಬಾರಕ್‌ ಎಂಬ ಯುವಕ ಬಜಾಜ್‌ ಫೈನಾನ್ಸ್ ಕಚೇರಿಗೆ ತೆರಳಿ ಮೊಬೈಲ್‌ ವಾಪಾಸ್‌ ಕೊಡುವಂತೆ ಕೇಳಿದ್ದಾನೆ. ಆಗ 6 ಸಾವಿರ ರೂಪಾಯಿ ಕಟ್ಟಿದ್ರೆ ಮೊಬೈಲ್‌ ಕೊಡ್ತೀವಿ ಅಂತಾ ಸಿಬ್ಬಂದಿ ಹೇಳಿದ್ದಾರೆ. ಅಷ್ಟೆಲ್ಲಾ ಆಗಲ್ಲಾ ಕಡಿಮೆ ಮಾಡಿ ಸರ್‌ ಅಂದಾಗ, 6 ಸಾವಿರ ರೂಪಾಯಿ ಕೊಟ್ಟು ಮೊಬೈಲ್‌ ತಗೊಂಡು ಹೋಗಿ ಎಂದಿದ್ದಾರೆ.

ಹೀಗಾಗಿ ಮಾರನೇ ದಿನ  ಮುಬಾರಕ್‌ ಎಂಬಾತ ಆರು ಸಾವಿರ ರೂಪಾಯಿ ತೆಗೆದುಕೊಂಡು ಹೋಗಿ ಟೇಬಲ್‌ ಮೇಲಿಟ್ಟು, ಮೊಬೈಲ್‌ ಕೊಡಿ ಸರ್‌ ಎಂದಿದ್ದಾನೆ. ಆಗ ಮೊಬೈಲ್‌ ನೋಡಿದ್ರೆ ಫುಲ್‌ ಖಾಲಿ ಹೊಸದು ತೆಗೆದುಕೊಂಡಾಗ ಹೇಗಿತ್ತೋ ಹಾಗೆ ಇತ್ತು.  ಮುಬಾರಕ್‌ ಹಾಕಿದ್ದ ಲಾಕ್‌ ಕೂಡ ಓಪನ್‌ ಆಗಿತ್ತು. ಇದೇನ್‌ ಸರ್‌ ಅಂತಾ ಕೇಳಿದ್ರೆ, ಇಲ್ಲಾ ಮೊಬೈಲ್‌ ಫ್ಲ್ಯಾಶ್‌ ಹೊಡೆದಿದ್ದೀವಿ ಅಂತಾ ಹೇಳಿದ್ದಾರೆ. ಸರ್‌, ನನ್ನ ಮೊಬೈಲ್‌ ಫ್ಲ್ಯಾಶ್‌ ಹೊಡೆಯೋದಕ್ಕೆ ನಿಮಗೆ ಅಧಿಕಾರ ಕೊಟ್ಟೋರು ಯಾರು? ನನ್ನ ಮೊಬೈಲ್‌ನಲ್ಲಿ ಕೆಲವು ಅವಶ್ಯಕ ದಾಖಲಾತಿಗಳೆಲ್ಲಾ ಇತ್ತು ಎಂದು ಹೇಳಿದ್ದಾನೆ. ಕೊನೆಗೆ ಈ ಮೊಬೈಲ್‌ನಲ್ಲಿ ನನ್ನ ಡಾಟಾ ಏನು ಇಲ್ಲಾ ಅಂದ್ರೆ ನನಗೆ ಮೊಬೈಲೇ ಬೇಡ ಅಂತಾ ಬಂದಿದ್ದಾನೆ.

ಅದಾದ ಬಳಿಕ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಬಜಾಜ್‌ ಫೈನಾನ್ಸ್‌ ಸಿಬ್ಬಂದಿ ಮುಬಾರಕ್‌ಗೆ ಕರೆ ಮಾಡಿದ್ದಾರೆ.  ನಿಮ್ಮ ಇಎಂಐ ಡ್ಯೂ ಆಗಿದೆ. 22 ಸಾವಿರ ರೂಪಾಯಿ ಕಟ್ಟಬೇಕಿದೆ. ಕ್ಲಿಯರ್‌ ಮಾಡ್ಕೊಳ್ಳಿ ಅಂತಾ ನಿತ್ಯ ಕರೆ ಮಾಡಿ ಟಾರ್ಚರ್‌ ಕೊಡುದ್ದಾರೆ.  ಇದನ್ನ ಕೇಳೋಕೆ ಮುಬಾರಕ್‌ ಕಚೇರಿಗೆ ಹೋಗಿದ್ದಾನೆ. ತನ್ನ ಮೊಬೈಲನ್ನ ನೀವು ಸೀಜ್‌ ಮಾಡಿದ್ದೀರಿ. ಅದರಲ್ಲಿರುವ ಡಾಟಾಗಳನ್ನ ಕೂಡ ಡಿಲೀಟ್‌ ಮಾಡಿದ್ದೀರಿ. ಈಗ ಇಪ್ಪತ್ತು ಸಾವಿರ ಕಟ್ಟಿ, ಮೂವತ್ತು ಸಾವಿರ ಕಟ್ಟಿ ಅಂತಿದ್ದೀರಲ್ಲಾ. ದಯವಿಟ್ಟು ನನಗೆ ಎನ್‌ಓಸಿ ಕೊಡಿ ಅಂತಾ ಕೇಳಿದ್ರೆ, ಯಾವೊಬ್ಬ ಸಿಬ್ಬಂದಿ ಕೂಡ ತಲೆ ಕೆಡಿಸಿಕೊಂಡಿಲ್ಲ. ಇವತ್ತು ಬಾ, ನಾಳೆ ಬಾ ಅಂತಾ ಪ್ರತಿನಿತ್ಯ ಕಚೇರಿಗೆ ಅಲೆಸಿದ್ದಾರೆ. ಕೊನೆಯಲ್ಲಿ ಕೇಳಿದ್ರೆ ನಿನ್ನ ಮೊಬೈಲ್‌ ನಾವು ಸೀಜ್‌ ಮಾಡೇ ಇಲ್ಲ. ನೀನು ದುಡ್ಡು ಕಟ್ಟಬೇಕು ಅಷ್ಟೇ ಅಂತಾ ಉಲ್ಟಾ ಹೊಡೆಯುತ್ತಿದ್ದಾರೆ.

ಒಂದು ಕಡೆ ಮೊಬೈಲನ್ನ ಕಿತ್ತುಕೊಂಡು ಹೋಗಿದ್ದಾರೆ. ಮತ್ತೊಂದು ಕಡೆ ಆ ಮೊಬೈಲ್‌ನಲ್ಲಿದ್ದ ಡಾಟಾಗಳನ್ನ ಡಿಲೀಟ್‌ ಮಾಡಿದ್ದಾರೆ. ಈಗ ಮತ್ತೆ ದುಡ್ಡು ಕಟ್ಟಿ ಅಂದ್ರೆ ಹೇಗೆ ಅಂತಾ ಮುಬಾರಕ್‌ ಕಂಗಾಲಾಗಿದ್ದಾನೆ. ಹೀಗಾಗಿ ಕಚೇರಿಯ ಆವರಣದಲ್ಲಿ ನೆಲದ ಮೆಲೆಯೇ ಕುಳಿತು ಮುಬಾರಕ್‌ ಪ್ರತಿಭಟನೆ ನಡೆಸಿದ್ದಾನೆ. ನನಗೆ ನನ್ನ ಮೊಬೈಲ್‌ ಹೇಗಿತ್ತೋ ಹಾಗೆ ಕೊಡಿಸಿದ್ರೆ, ನಾನು ಹಣ ಕಟ್ಟುತ್ತೇನೆ. ಇಲ್ಲವಾದಲ್ಲಿ ನನಗೆ ಎನ್‌ಓಸಿ ಕೊಡಿ. ಯಾವುದೂ ಆಗಲ್ಲ ಅಂದ್ರೆ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು  ಯುವಕ ಮುಬಾರಕ್‌ ಬಜಾಜ್‌ ಫೈನಾನ್ಸ್‌ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾನೆ.

ಅದೇನೇ ಇರಲಿ ಈ ಫೈನಾನ್ಸ್‌ ಕಂಪನಿಯವರ ಅಟ್ಟಹಾಸ ಮಿತಿ ಮೀರ್ತಿರೋದಂತೂ ಸುಳ್ಳಲ್ಲ. ಬಡವರ ದುಡ್ಡಿನಲ್ಲಿಯೇ ಜೀವನ ನಡೆಸಿ, ಕೊನೆಗೆ ಆ ಬಡವರಿಗೇ ನರಕ ತೋರಿಸೋ ಇಂಥಹ ಕಂಪನಿಗಳಿಗೆ ಸರ್ಕಾರಗಳು ನಿಯಂತ್ರಣ ಹೇರಲೇಬೇಕಿದೆ.

 

Author:

...
Sub Editor

ManyaSoft Admin

Ads in Post
share
No Reviews